ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಆ.30 ರಿಂದ ಸೆ.1 ವರೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 12 ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆಂದು ರಾಜ್ಯ ಸಂಘಟನೆ ಉಪಾಧ್ಯಕ್ಷೆ ಶ್ಯಾಮಲಾ ಕಲಾಲಬಂಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಗೆ ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಸಮ್ಮೇಳ ನಡೆಯಲಿದೆ. ಸಂಘಟನೆ ಸ್ವಾತಂತ್ರ್ಯ ಪೂರ್ವದಿಂದಲು ಮಹಿಳೆಯರ ಅಸ್ಮಿತೆಗಾಗಿ ಹೋರಾಟ ನಡೆಸುತ್ತಾ ಬಂದಿದೆ. 1981 ರಿಂದ ಅಧಿಕೃತ ಜನವಾದಿ ಮಹಿಳಾ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳಾ ವಿಮೋಚನೆ ಸಂಘಟನೆ ಧೈಯವಾಗಿದ್ದು ಪ್ರತಿ ಮೂರು ವರ್ಷಕ್ಕೆ ಜಿಲ್ಲಾ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪುನರ ರಚನೆಯೊಂದಿಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯ ಎಲ್ಲಾ ಜಿಲ್ಲೆಗಳಿಂದ ಸರಿ ಸುಮಾರು 500ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಅಪೌಷ್ಠಿಕತೆ, ರಕ್ತ ಹೀನತೆ, ಸ್ತ್ರೀ ಬ್ರೂಣಹತ್ಯೆ, ನಿರುದ್ಯೋಗ,ವಲಸೆ, ಮಹಿಳಾ ಸಾಗಾಣೆ ಸಮಸ್ಯೆಗಳಿಂದ ಮಹಿಳೆಯ ಸ್ಥಿತಿ ಶೋಚನೀಯವಾಗಿದ್ದು ಎಲ್ಲಾ ಹಂತ ಪರಸ್ಥಿತಿಯನ್ನು ಪರಾಮರ್ಶಿಸಿ ಪರಿಹಾರಾತ್ಮಕ ಸಮ್ಮೇಳನ ನಡೆಯಲಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ವರಲಕ್ಷ್ಮೀ ಮಾತನಾಡಿ, ಜನವಾದಿ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಮರಿಯಮ್ಮ ಧವಳೆ, ರಾಜ್ಯ ಉಸ್ತುವಾರಿ ವಾಸುಕಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಿಂಧನೂರಿನಲ್ಲಿ ಮಹಿಳೆಯ ಬೃಹರ್ ರ‌್ಯಾಲಿ ನಡೆಯಲಿದೆ. ಮೂರು ದಿನಗಳವರೆಗೆ ವಿವಿಧ ಗೋಷ್ಟಿಗಳು, ಚರ್ಚೆ, ಸಂವಾದಗಳು, ಬಹಿರಂಗ ಸಭೆ ನಡೆಯಲಿವೆ. ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಉಚಿತ ಊಟ, ವಸತಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಕುಂತಲಾ ನಾಗಿರೆಡ್ಡಿ, ಶಕುಂತಲಾ ದೇಸಾಯಿ, ಸುಲೋಚನಾ ಸಂಘ, ವಿಜಯಲಕ್ಷ್ಮೀ ಇದ್ದರು.