ಜಿಲ್ಲೆ

ಜನೌಷಧದಿಂದ ಬಡ ಕುಟುಂಬಗಳಿಗೆ ಅನುಕೂಲ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಪಂಚಾಯಿತಿಗೊಂದು ಜನೌಷಧ ಕೇಂದ್ರ ಅಥವಾ ಜನಸಂಖ್ಯೆ ಆಧಾರಿತ ಕೇಂದ್ರ ತೆರೆಯಲು ಮುಂದಾಗಬೇಕು. ಜನೌಷಧ ಕೇಂದ್ರ ಹೊಂದಿದವರು ವ್ಯಾಪಾರಕ್ಕಿಂತ ಸೇವಾ ಮನೋಭಾವ ಉಳ್ಳವರಾಗಿರಬೇಕು. ಜನೌಷಧದಿಂದ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ನೆರವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರದಲ್ಲಿ ಮಂಗಳವಾರ ಜನೌಷಧ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ಕೆ., ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ, ಜನೌಷಧದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಾರುಕಟ್ಟೆ ಮುಖ್ಯಸ್ಥ ಶಿವಕುಮಾರ್, ಜಿಲ್ಲಾ ಸಂಯೋಜಕ ಡೊನಾಲ್ಡ್ ಸಾಲಿನ್ಸ್, ಜನೌಷಧ ಕೇಂದ್ರ ಮಾಲೀಕರ ಸಂಘ ಅಧ್ಯಕ್ಷ ವಸಂತಕುಮಾರ್ ಉಪಸ್ಥಿತರಿದ್ದರು.

ಕುಂದಾಪುರ ಸರ್ಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ್‌ಗಳಾದ ಜಯಶ್ರೀ ಶೆಟ್ಟಿಗಾರ್, ಲತಾ, ಆಶಾ ಕಾರ್ಯಕರ್ತೆಯರಾದ ಕಲ್ಪನಾ ಗಂಗೊಳ್ಳಿ, ನಾಗರತ್ನಾ ಬಸ್ರೂರು, ಸುಲೋಚನಾ ಸಿದ್ದಾಪುರ, ಸುಶೀಲಾ ಸತೀಶ್ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು. ಎಸ್.ಜಯಕರ ಶೆಟ್ಟಿ ಸ್ವಾಗತಿಸಿದರು. ಡಾ.ಸೋನಿ ಡಿಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು.