ಜಿಲ್ಲೆ

13ಕ್ಕೆ ಜನತಾ ದರ್ಶನ ಮುಂದೂಡಿಕೆ

ಲಲಾಟಾಕ್ಷ ಎಸ್

ಹನೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಸಮ್ಮುಖದಲ್ಲಿ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಜ.11ರಂದು ನಡೆಯಬೇಕಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು 13ಕ್ಕೆ ಮುಂದೂಡಲಾಗಿದೆ.


ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ಪ್ರಭಾರ ತಹಸೀಲ್ದಾರ್ ಮಂಜುಳಾ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಆಸನ, ಶಾಮಿಯಾನ ವ್ಯವಸ್ಥೆ ಮಾಡಬೇಕು. ಅರ್ಜಿ ಸ್ವೀಕರಿಸಲು ಪ್ರತ್ಯೇಕ ಕೌಂಟರ್ ಹಾಗೂ ನೋಂದಣಿ ಕೇಂದ್ರ ತೆರೆಯಬೇಕು. ವಿದ್ಯುತ್ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಸ್ವೀಕೃತವಾಗುವ ಅರ್ಜಿಗಳನ್ನು ತಂತ್ರಾಂಶದಲ್ಲಿ ದಾಖಲಿಸಲು ಅಗತ್ಯ ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾಯಕ್ರಮ ಯಾವುದೇ ಲೋಪವಿಲ್ಲದೆ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಾದೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ ಮತ್ತಿತರರಿದ್ದರು.