ಜಿಲ್ಲೆ

ಜನತಾದರ್ಶನದಲ್ಲಿ ರೈತರ ಅಳಲು: ಕಂದಾಯ ಇಲಾಖೆ ವಿರುದ್ಧ ದೂರಿನ ಸುರಿಮಳೆ

ಮಂಡ್ಯ: ಆರ್‌ಟಿಸಿ ತಿದ್ದುಪಡಿಗೆ ಅರ್ಜಿ ಕೊಟ್ಟರೂ ಕ್ರಮವಿಲ್ಲ, ತನ್ನ ಮರ ಕಟಾವು ಮಾಡಿದ್ದಕ್ಕೆ ಸೂಕ್ತ ಪರಿಹಾರ ಕೊಡಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ, ಅರ್ಜಿ ಕೊಟ್ಟು ಎರಡು ತಿಂಗಳಾದರೂ ಜಮೀನಿನ ಖಾತೆ ಮಾಡಲ್ಲ.

ಇದು ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾದರ್ಶನದಲ್ಲಿ ಕಂದಾಯ ಇಲಾಖೆ ವಿರುದ್ಧ ರೈತರ ದೂರಿನ ಸುರಿಮಳೆ. ಕಾರ್ಯಕ್ರಮದಲ್ಲಿ ಸುಮಾರು 140 ಅರ್ಜಿಗಳನ್ನು ಸಲ್ಲಿಸಲಾಯಿತು. ಈ ಪೈಕಿ ಕಂದಾಯ ಇಲಾಖೆಗೆ ಸೇರಿದ್ದೆ ಬಹುಪಾಲು. ರೈತರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ರೂಪದಲ್ಲಿ ಕೊಟ್ಟು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿ, ಕೆಲ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದಾಗ ರೈತರ ಮುಖದಲ್ಲಿ ಮಂದಹಾಸ ಮೂಡಿತು.

ಸ್ಥಳದಲ್ಲಿದ್ದ ಆರ್‌ಐ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ತಾಲೂಕು ಅಧಿಕಾರಿಗಳಿಂದ ಅರ್ಜಿಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡರು. ನಂತರ ಯಾವುದೇ ಅರ್ಜಿಯೂ ಉಳಿದುಕೊಳ್ಳಬಾರದೆಂದು ಪಕ್ಕದಲ್ಲಿಯೇ ಕಂಪ್ಯೂಟರ್‌ಗಳನ್ನಿಟ್ಟುಕೊಂಡು ಆಯಾ ಸಿಬ್ಬಂದಿಯ ಮೂಲಕ ನಂಬರ್ ಕೋಡ್‌ಗಳ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಅಗತ್ಯ ದಾಖಲೆಗಳು ಸಿಗದಿದ್ದರೆ ತದನಂತರ ಬಗೆಹರಿಸಿಕೊಡಲು ದಿನಾಂಕವನ್ನು ನಿಗದಿ ಮಾಡಿ ಕಳುಹಿಸಿಕೊಡಲಾಗುತ್ತಿತ್ತು.

ಉಪ್ಪಾರಕನಹಳ್ಳಿ ಗ್ರಾಮದ ರೈತ ಮಹಿಳೆ ಸರಸ್ವತಮ್ಮ ಮಾತನಾಡಿ, ಜಮೀನಿನ ಆರ್‌ಟಿಸಿ 10 ಗುಂಟೆ ಇರುವುದು ಕೇವಲ 4 ಗುಂಟೆ ಮಾತ್ರ ಬರುತ್ತಿದೆ. ಇದನ್ನು ಸರಿಪಡಿಸುವಂತೆ ಅರ್ಜಿ ಕೊಟ್ಟು ಮೂರು ವರ್ಷವೇ ಕಳೆದಿದೆಯಾದರೂ ಸಮಸ್ಯೆ ಬಗೆಹರಿಸಿಕೊಟ್ಟಿರಲಿಲ್ಲ. ಜನತಾ ದರ್ಶನದ ಮೂಲಕ ಸ್ಥಳದಲ್ಲಿದ್ದ ಆರ್‌ಐ ಮತ್ತು ಗ್ರಾಮ ಲೆಕ್ಕಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡುವ ಮೂಲಕ ಮೂರು ದಿನದಲ್ಲಿಯೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸುವಂತೆ ಆದೇಶ ನೀಡಿದರು.

ಸಂಪಹಳ್ಳಿ ಗ್ರಾಮದ ರೈತ ಶಿವಶಂಕರ್, ತತ್ಕಾಲ್ ಪೋಡ್ ಅರ್ಜಿ ಹಾಕಿ ಮೂರು ವರ್ಷ, ಆರ್‌ಟಿಸಿ ಇಂಡೀಕರಣ ಮಾಡಲು ಅರ್ಜಿ ನೀಡಿ ಏಳು ವರ್ಷ ಕಳೆದರೂ ಬಗೆಹರಿಸಿಲ್ಲ ಎಂದು ಗಮನಕ್ಕೆ ತಂದರು. ಇದನ್ನು ಆಲಿಸಿದ ಡಾ.ಕುಮಾರ ಅವರು ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಎಲ್ಲ ಅರ್ಜಿಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ತಿಳಿಸಿದರು.

ತಾಲೂಕಿನ ಬೇಲೂರು ಗ್ರಾಮದ ಸರ್ವೆ ನಂ. 183/21ರ ಜಮೀನು ಖಾತೆ ಮಾಡಿಕೊಡುವಂತೆ ಅರ್ಜಿ ನೀಡಿ ಎರಡು ತಿಂಗಳು ಆಗಿತ್ತು. ಅದನ್ನು ಖಾತೆ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿ ತಿಳಿಸಿದರು. ಅಂತೆಯೇ ಹೊನಗಾನಹಳ್ಳಿ ಗ್ರಾಮದ ಸರ್ವೆ ನಂ.63 ರಲ್ಲಿ 3.27 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸವಂತೆ ಕೊಮ್ಮೇರಹಳ್ಳಿ ಗ್ರಾಮದ ಆನಂದ್ ಕುಮಾರ್ ಮತ್ತು ವಕೀಲ ಯೋಗಾನಂದ ಅವರು ಅರ್ಜಿ ನೀಡಿದ್ದರು. ಈ ಅರ್ಜಿ ನೀಡಿ 10 ವರ್ಷವೇ ಕಳೆದಿತ್ತು. ಜನತಾ ದರ್ಶನದಲ್ಲಿ ಒತ್ತುವರಿ ಜಾಗ ತೆರವುಗೊಳಿಸುವಂತೆ ಮನವಿ ಮಾಡಿದಾಗ, ಇನ್ನೆರಡು ದಿನದಲ್ಲಿ ಸಂಬಂಧಪಟ್ಟ ಸರ್ವೇಯರ್ ಮೂಲಕ ಸ್ಥಳ ಮಹಜರು ಮಾಡಿಸಿ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಅವರು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಈ ಪೈಕಿ ರೈತ ಬಿ.ಯರಹಳ್ಳಿ ಬಿ.ಬೊಮ್ಮೇಗೌಡ ಜನತಾದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನನ್ನ ಕೆಲಸವಾಗಿರುವುದು ಸಂತೋಷ ತರಿಸಿದೆ. ಇಂತಹ ಕಾರ್ಯಕ್ರಮವನ್ನು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಮಾಡಬೇಕು ಎಂದು ಮನವಿ ಮಾಡಿದರು.