ಜಿಲ್ಲೆ

ಗದಗನಲ್ಲಿ "ಜನತಾ ಸದನ': ಅನಿಲ್​ ಮೆಣಸಿನಕಾಯಿ ನೇತತ್ವದಲ್ಲಿ ವಿನೂತನ ಪ್ರಯೋಗ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ವಿಧಾನ ಸಭೆ ಮತ್ತು ವಿಧಾನ ಪರಿಷತ್​ ಅಧಿವೇಶನದಂತೆ ನಗರದ ಗಾಣಿಗೇರ ಭವನದಲ್ಲಿ ಜೂ.9 ಮತ್ತು 10 ರಂದು "ಜನತಾ ಸದನ' ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಅನಿಲ್​ ಮೆಣಸಿನಕಾಯಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತುಗಳ ಅಧಿವೇಶನದಲ್ಲಿ ಅಭಿವೃದ್ಧಿ ವಿಷಯ, ಮಸೂದೆಗಳ ಮಂಡನೆ, ಹಲವು ನಿರ್ಧಾರಗಳ ಪ್ರಕಟ, ರಾಜಕೀಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ಆಗುತ್ತವೆ. ಅದೇ ರೀತಿ ಗದಗನಲ್ಲೂ ಜನತಾಸದನ ನಡೆಸಲಾಗುವುದು. ಸದನಲ್ಲಿ ನೆಲ-ಜಲ, ನಾಡು-ನುಡಿ, ಗಡಿ, ಗ್ರಾಮೀಣ, ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಚಚಿರ್ಸಲಾಗುವುದು. ಸರ್ವತೋಮುಖ ಅಭಿವೃದ್ಧಿ, ಸಂಸದೀಯ ವ್ಯವಹಾರಗಳ ತಿಳುವಳಿಕೆ, ಕಾನೂನು ಅರಿವು ಮೂಡಿಸಬೇಕೆಂಬ ಹೊಸ ಪರಿಕಲ್ಪನೆ ಮೂಲಕ ಜನತಾ ಸದನ ನಡೆಸಲಾಗುವುದು ಎಂದು ಅನಿಲ್​ ಮೆಣಸಿನಕಾಯಿ ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ವರ್ಷಕ್ಕೆ ಎರಡೇ ಸದನಗಳು, ಕೆಲಮೊಮ್ಮೆ ವಿಶೇಷ ಸಂದರ್ಭದಲ್ಲಿ ಜಂಟಿಯಾಗಿ ನಡೆಯುತ್ತವೆ. ಮುಂಗಾರು, ಚಳಿಗಾಲ ಅಧಿವೇಶನ ಜರಗುವಂತೆ ಜನತಾ ಸದನವು ಪ್ರತಿ ತಿಂಗಳು ನಡೆಯುತ್ತದೆ ಎಂದರು.
ಸಚಿವರ ನೇಮಕ:
ಜನತಾ ಸದನವು ಪ್ರತಿ ತಿಂಗಳು ನಾಲ್ಕನೇ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಒಂದು ದಿನ ಗ್ರಾಮೀಣ, ಮತ್ತೊಂದು ದಿನ ನಗರ ಪ್ರದೇಶದಲ್ಲಿ ಜರುಗಲಿದೆ. ಸದನದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ಜನತಾ ಸದನದಲ್ಲಿ ಜನರು ತಮ್ಮ ಕಾಲನಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಮುಕ್ತ ಅವಕಾಶವಿದೆ. ಸರ್ಕಾರದಲ್ಲಿ ಸಚಿವರನ್ನು ನೇಮಿಸಿರುವಂತೆ ಪ್ರತಿ ವಿಭಾಗದಲ್ಲಿ ಸಚಿವರನ್ನು ನೇಮಕ ಮಾಡಲಾಗುತ್ತದೆ. ಗ್ರಾಮೀಣ ಹಾಗೂ ಶಹರ ಪ್ರದೇಶಗಳಿಗೆ ಪ್ರತ್ಯೇಕ ಜನತಾ ಸಚಿವರನ್ನು ನೇಮಕ ಗೊಳಿಸಲಾಗುತ್ತದೆ ಎಂದರು.

ಚರ್ಚಾ ವಿಷಯಗಳು:
ಕುಡಿಯುವ ನೀರು, ಒಳಚರಂಡಿ, ರಸ್ತೆ, ಗಟಾರು, ಸಾರ್ವಜನಿಕ ಶೌಚಾಲಯ, ವಸತಿ, ಸ್ವಚ್ಛತೆ, ವಿದ್ಯುತ್​ ದೀಪ ಅಳವಡಿಕೆ ಸೇರಿದಂತೆ ಮೂಲಸೌಕರ್ಯ, ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು, ಶಿಕ್ಷಣ, ಸಮಾಜ ಕಲ್ಯಾಣ, ಅಬಕಾರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪಶುಸಂಗೋಪನೆ, ಪ್ರವಾಸೋದ್ಯಮ, ಜವಳಿ ಮತ್ತು ಕೈಮಗ್ಗ ಸೇರಿದಂತೆ ಇನ್ನುಳಿದ ಇಲಾಖೆಗಳಿಗೆ ಸಂಬಂಧಿಸಿದ ಸ್ಥಳಿಯ ಸಮಸ್ಯೆಗಳ ಬಗ್ಗೆ ಜನರು ನೇಮಕಗೊಂಡಿರುವ ಜನತಾ ಸಚಿವರ ಗಮನಕ್ಕೆ ತರಬಹುದು.

ಅನುಕೂಲತೆಗಳೇನು?

  • ಜನತಾ ಸದನದಿಂದ ಸ್ಥಳಿಯ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯಲಿವೆ.
  • ಸಂಸದೀಯ ವ್ಯವಹಾರಗಳ ಬಗ್ಗೆ ತಿಳುವಳಿಕೆ, ಕಾನೂನು ಅರಿವಾಗಲಿದೆ.
  • ಜನಪ್ರತಿನಿಧಿಗಳಂತೆ, ಸಾಮಾನ್ಯ ಜನರು ಸಹಿತ ಉತ್ತಮ ಸಂಸದೀಯ ಪಟುಗಳಾಗಿ ಹೊರಹೊಮ್ಮಲು ಅನುಕೂಲ
  • ಸದನದ ಗಾಂಭೀರ್ಯತೆಗಳನ್ನು ತಿಳಿದುಕೊಳ್ಳಲು ಸುವರ್ಣವಕಾಶ ಸಿಗಲಿದೆ.
  • ಒಂದೇ ವೇದಿಕೆಯಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ.

ವಿಶೇಷತೆಗಳೇನು?

  • ಸಂಸತ್​ ಮತ್ತು ವಿಧಾನಸಭೆ ಅಧಿವೇಶನಗಳಲ್ಲಿರುವಂತೆ ಜನತಾಸದನದಲ್ಲಿಯೂ ಸ್ಪೀಕರ್​, ಜನತಾ ಸಭಾ ನಾಯಕರು, ವಿರೋಧ ಪಕ್ಷದ ನಾಯಕರು ಇರಲಿದ್ದಾರೆ.
  • ಇವರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇರಲಿದೆ. ಜೊತೆಗೆ ಇಲಾಖಾಧಿಕಾರಿಗಳ ಗ್ಯಾಲರಿ, ವೀಕ್ಷಕ ಗ್ಯಾಲರಿ, ಪತ್ರಕರ್ತರ ಗ್ಯಾಲರಿ ಇರಲಿದೆ.
  • ಜನತಾ ಸಚಿವರಿಗೆ ಜನತಾ ಗೌರ್ನರ್​ ಪ್ರಮಾಣ ವಚನ ಬೋಧಿಸಲಿದ್ದಾರೆ.
  • ಜನತಾ ಸದನದಲ್ಲಿ ಜನರೇ ಶಾಸಕರು.
  • ಪ್ರತಿ ಅಧಿವೇಶನಕ್ಕೂ ರಾಜ್ಯದ ಗಣ್ಯ ರಾಜಕಾರಣಿಗಳು, ನಗರಸಭೆ ಸದಸ್ಯರು- ಪರಾಜಿತ ಅಭ್ಯಥಿರ್ಗಳು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಬುದ್ಧೀಜಿವಿಗಳು, ಜನಪರ ಚಿಂತಕರು, ಸಾಹಿತಿಗಳು, ನಿವೃತ್ತ ಉಪನ್ಯಾಸಕರು, ನ್ಯಾಯಾಧೀಶರು ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.