ಶಿರಹಟ್ಟಿ: ಜನಸಾಮಾನ್ಯರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧ್ಯಕ್ಷತೆಯಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಮಟ್ಟದ ಮೊದಲ ಜನತಾ ದರ್ಶನ ಮಂಗಳವಾರ ಏರ್ಪಡಿಸಲಾಗಿತ್ತು.
ಮಾಸಾಶನ, ಸಾಮಾಜಿಕ ಭದ್ರತಾ ಯೋಜನೆ, ಆಶ್ರಯ ಮನೆಗಳ ಮಂಜೂರಾತಿ, ಮನೆ ನಿರ್ಮಾಣದ ಅನುದಾನ ಬಿಡುಗಡೆ, ಭೂದಾಖಲಾತಿ, ಜಮೀನುಗಳಿಗೆ ಸಂಚರಿಸಲು ರಸ್ತೆ ನಿರ್ಮಾಣ, ಸಾಲ ಸೌಲಭ್ಯ, ಸ್ಮಶಾನ ಅಭಿವೃದ್ಧಿ, ಬೆಳೆ ವಿಮೆ, ಕಾಲುವೆ ನಿರ್ಮಾಣ, ಬೆಳೆ ಸಾಲ ಮನ್ನಾ, ವಿದ್ಯುತ್ ಸಂಪರ್ಕ, ಗೃಹಲಕ್ಷ್ಮೀ ಯೋಜನೆ ಇತ್ಯಾದಿ ಸಮಸ್ಯೆ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಕೆಲ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಥಳದಲ್ಲೇ ಪರಿಹಾರ ನೀಡಿದರೆ, ಕೆಲವರಿಗೆ ಸಮಯಾವಕಾಶ ನೀಡಿದರು.
ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 985 ಅಹವಾಲುಗಳು ಸ್ವೀಕೃತವಾಗಿದ್ದವು. ಅಂದು ವಿವಿಧ ತಾಲೂಕುಗಳ ಸಾರ್ವಜನಿಕರು ಅಹವಾಲು ಸಲ್ಲಿಸಿದ್ದರು. ಹೀಗಾಗಿ, ಜಿಲ್ಲೆಯವರೆಗೆ ಬರುವ ತಾಪತ್ರಯ ತಪ್ಪಿಸಲು ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ನೀಡುವ ಉದ್ದೇಶ ತಮ್ಮದು ಎಂದರು.
‘ಮನೆ ನಿರ್ಮಾಣದ ಮೊದಲ ಕಂತಿನ ಅನುದಾನ ಬಿಡುಗಡೆಗೆ ಜಿಪಂ ಕೇಸ್ ವರ್ಕರ್ 3 ಸಾವಿರ ರೂ. ಕೇಳುತ್ತಾರೆ’ ಎಂದು ಮಜ್ಜೂರ ಗ್ರಾಮದ ನಿವಾಸಿ ಗುಡದಪ್ಪ ಭಂಡಾರಿ ಎಂಬುವವರು ದೂರಿದರು. ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಜಿಲ್ಲಾಧಿಕಾರಿ ತಿಳಿಸಿದರು.
‘ನೀರಾವರಿ ಆಶ್ರಿತ ಜಮೀನಿನ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂಗೆ ಹಣ ಪಾವತಿಸಿದ್ದರೂ 4-5 ತಿಂಗಳಿಂದ ಸತಾಯಿಸುತ್ತಿದ್ದಾರೆ’ ಎಂದು ಛಬ್ಬಿ ಗ್ರಾಮದ ಹೇಮಂತ ಲಮಾಣಿ ದೂರಿದರು. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸ್ಥಳದಲ್ಲಿದ್ದ ಹೆಸ್ಕಾಂ ಅಧಿಕಾರಿಗೆ ಡಿಸಿ ಸೂಚಿಸಿದರು.
‘ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತವಾಗಿಲ್ಲ’ ಎಂದು ವಡವಿ ಗ್ರಾಮದ ಪ್ರವೀಣಗೌಡ ಪಾಟೀಲ ದೂರಿದರು.
ತಹಸೀಲ್ದಾರ್, ಇಒ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲು ಡಿಸಿ ಸೂಚಿಸಿದರು.
‘17 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರೊದಗಿಸುವ ಮಜ್ಜೂರ ಕೆರೆ ಕಳೆದ 10 ವರ್ಷದಿಂದ ಹದಗೆಟ್ಟಿದೆ’ ಎಂದು ಮಾಚೇನಹಳ್ಳಿ ಗ್ರಾಮದ ಶಂಕರ ಮರಾಠೆ ದೂರಿದರು. ಆದರೆ, ಸಭೆಗೆ ಆಗಮಿಸದ ಅಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿ ವಾರದೊಳಗೆ ಮಾಹಿತಿ ನೀಡಲು ಸೂಚಿಸಿದರು.
ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಿಗದಿಯಾದ ಬಗ್ಗೆ ಸೂಚನೆ ನೀಡಿದ್ದರೂ ಕೆಲ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿರುವುದು ಗಮನಕ್ಕೆ ಬಂದಿದೆ. ಶಿಷ್ಟಾಚಾರ ಪಾಲಿಸಿದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಲು ತಹಸೀಲ್ದಾರ್‌ಗೆ ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಬಯೋಮೆಟ್ರಿಕ್ ಯಂತ್ರ ಅಳವಡಿಕೆ ಬಗ್ಗೆ ಪದೇ ಪದೆ ಪ್ರಸ್ತಾಪವಾಗುತ್ತಿರುವ ಸಂಗತಿ ದುರಾದೃಷ್ಟಕರ. ಈ ವಿಷಯ ಪ್ರಸ್ತಾಪವಾಗದಂತೆ ಕೂಡಲೇ ಅಳವಡಿಸದ ಕಚೇರಿಗಳಲ್ಲಿ ಕಾರ್ಯಗತಗೊಳಿಸಿ. ಅದರಿಂದಲೇ ಮಾಸಿಕ ವೇತನ ಪಾವತಿಯಾಗುವಂತೆ ನೋಡಿ ಕೊಳ್ಳುವ ಜವಾಬ್ದಾರಿ ಇಲಾಖೆ ಮುಖ್ಯಸ್ಥರದು.I ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ