ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಆಯಾ ಜಿಲ್ಲೆಯ ಜನರ ದುಖಃ ದುಮ್ಮಾನಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಜನತಾದರ್ಶನ’ ಪರಿಕಲ್ಪನೆಯೊಂದು ಸದ್ದಿಲ್ಲದೆ ತೆರೆಮರೆಗೆ ಸರಿದಿದೆ. ಆಯಾ ಜಿಲ್ಲೆಯಗಳ ಉಸ್ತುವಾರಿ ಸಚಿವರು ಕನಿಷ್ಟ ತಿಂಗಳಿಗೊಮ್ಮೆ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ನೇರ ಸಂಪರ್ಕ ಕಲ್ಪಿಸುವ ವೇದಿಕೆ ನಿರ್ಮಾಣ ಮಾಡುವಂತೆ ತಿಳಿಸಿದ್ದ ಸರ್ಕಾರದ ಸೂಚನೆ ನೇಪಥ್ಯಕ್ಕೆ ಸರಿದಿದೆ.
ಹೌದು! ರಾಜ್ಯ ಸರ್ಕಾರದ ಆರಂಭದ ಶೂರತ್ವದ ಜನತಾದರ್ಶನ ದಿನಕಳೆದಂತೆ ನನೆಗುದಿಗೆ ಬಿದ್ದಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿನ ಜನತಾದರ್ಶನ ಕಾರ್ಯಕ್ರಮ ಜನಮಾನಸದಿಂದ ದೂರವೇ ಸರಿದಂತಾಗಿದೆ. ಸುಮಾರು ಏಳೆಂಟು ತಿಂಗಳಿಂದ ಜನತಾದರ್ಶನ ಆಯೋಜಿಸುವ ಬಗ್ಗೆ ಎಲ್ಲಿಯೂ ಸದ್ದು ಕೇಳಿಬರುತ್ತಿಲ್ಲ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಉಸ್ತುವಾರಿ ಸಚಿವರೂ ಸೇರಿ ಶಾಸಕರೂ ಮೌನಕ್ಕೆ ಜಾರಿರುವುದು ಸಾರ್ವಜನಿಕರ ಕುಂದುಕೊರತೆ ಆಲಿಸುವ ಕಿವಿಗಳೇ ಎಂಬ ದೂರು ವ್ಯಕ್ತವಾಗಿದೆ.
ದೇವನಹಳ್ಳಿಗೆ ಸೀಮಿತವಾಗಿತ್ತು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹಿಡಿದ ಹೊಸದರಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸರಣಿಯಂತೆ ಜನತಾದರ್ಶನ ಆಯೋಜನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅದೆಲ್ಲ ಕೇವಲ ದೇವನಹಳ್ಳಿ ಕ್ಷೇತ್ರಕ್ಕೆ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಜಿಲ್ಲೆಯ ಇತರ ತಾಲೂಕುಗಳಲ್ಲಿ ಆಯೋಜನೆ ಮಾಡುವ ಭರವಸೆ ನೀಡಿದರಾದರೂ ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ದೊಡ್ಡಬಳ್ಳಾಪುರದಲ್ಲಿ ಶಾಸಕ ಧೀರಜ್‌ಮುನಿರಾಜು ಕೆಲವೊಂದು ಜನತಾದರ್ಶನ ಮಾದರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಆಲಿಸುವ ಪ್ರಯತ್ನ ಮಾಡಿದ್ದರು. ನಂತರದಲ್ಲಿ ಹೊಸಹೋಟೆ ಹಾಗೂ ನೆಲಮಂಗಲ ಕ್ಷೇತ್ರದಲ್ಲಿ ಇಂಥ ಪ್ರಯತ್ನ ನಡೆಯಿತಾದರೂ ನಂತರದ ದಿನಗಳಲ್ಲಿ ಜನತಾದರ್ಶನ ಪರಿಕಲ್ಪನೆಯೇ ಕಣ್ಮರೆಯಾಗಿದೆ.
ಭೂಸ್ವಾಧೀನ ವಿರೋಧಿ ಎೆಕ್ಟ್: ದೇವನಹಳ್ಳಿ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಭುಗೆಲೆದ್ದಿರುವ ಭೂಸ್ವಾಧೀನ ವಿರೋಧಿ ಹೋರಾಟದ ಕಾವು ನೇರವಾಗಿ ಉಸ್ತುವಾರಿ ಸಚಿವರನ್ನು ಕಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಯಾವುದೇ ಸಭೆ ಸಮಾರಂಭಗಳಲ್ಲೂ ಇದೇ ವಿಷಯ ಪ್ರಸ್ತಾಪವಾಗುತ್ತಿದ್ದು ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಿದರೆ ಅಲ್ಲಿ ಬಹುಪಾಲು ಭೂಸ್ವಾಧೀನ ವಿರೋಧದ ಬಗ್ಗೆಯೆ ಚರ್ಚೆಯಾಗುತ್ತಿದೆ ಎನ್ನಲಾಗಿದ್ದು ಅಡಕತ್ತರಿಯಲ್ಲಿ ಸಿಲುಕಿದಂತಾಗಿರುವ ಉಸ್ತುವಾರಿ ಸಚಿವರು ಜನತಾದರ್ಶನ ಪರಿಕಲ್ಪನೆಯಿಂದಲೇ ದೂರ ಸರಿದಿದ್ದಾರೆ ಎಂಬ ಅರೋಪ ಕೇಳಿಬರುತ್ತಿದೆ. ಇನ್ನು ನೆಲಮಂಗಲ ವ್ಯಾಪ್ತಿಯಲ್ಲಿ ಏರ್‌ಪೋರ್ಟ್ ನಿರ್ಮಾಣದ ತಗಾದೆ, ಹೊಸಕೋಟೆಯಲ್ಲಿ ಟೌನ್‌ಶ್ಿ ವ್ಯಾಜ್ಯ, ದೊಡ್ಡಬಳ್ಳಾಪುರದಲ್ಲಿ ಜಲಾಶಯ ನಿರ್ಮಾಣದ ವಿವಾದ ಜನಪ್ರತಿನಿಧಿಗಳನ್ನು ತಳಮಳಗೊಳಿಸುತ್ತಿದೆ. ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲೇ ಹಿಂದೇಟು ಹಾಕುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಸಂಸದರ ಜನತಾದರ್ಶನ: ರಾಜ್ಯ ಸರ್ಕಾರದ ಜನತಾದರ್ಶನ ದೂರವಾದರೂ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ವಾರಕ್ಕೊಮ್ಮೆ ಲೋಕಸಭಾ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಜನತಾದರ್ಶನ ನಡೆಯುತ್ತಿರುವುದು ಜಿಲ್ಲೆಯ ಜನರಿಗೆ ತುಸು ಆಸರೆ ಎನ್ನುವಂತಾಗಿದೆ. ಆದರೆ ಅಲ್ಲಿಯೂ ವಾರಕ್ಕೊಮ್ಮೆ ತಪ್ಪದೆ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಬೇಸರವೂ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಕಚೇರಿಗೆ ಅಲೆದಾಡುವುದು ತಪ್ಪಿಲ್ಲ: ಸಾರ್ವಜನಿಕರು ಸರ್ಕಾರಿ ಕೆಲಸಕ್ಕೆ ಜಿಲ್ಲಾಡಳಿತಭವನ ತಹಸೀಲ್ದಾರ್ ಕಚೇರಿ ಸೇರಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸುವ ಸಲುವಾಗಿ ರೂಪಿಸಿದ ಜನತಾದರ್ಶನಕ್ಕೆ ಆರಂಭದಲ್ಲಿದ್ದ ಉತ್ಸಾಹ ಪ್ರಸ್ತುತ ಕಂಡುಬರುತ್ತಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಡಿಸಿ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಯಶ ಕಂಡಿತ್ತು. ಅಂದಿನ ಸರ್ಕಾರದ ಕೊನೆ ಆಡಳಿತದವರೆಗೆ ಈ ಕಾರ್ಯಕ್ರಮ ಸಕ್ರಿಯವಾಗಿದ್ದ ಪರಿಣಾಮ ಸಾಕಷ್ಟು ಸಾರ್ವಜನಿಕರಿಗೆ ಇದು ಉಪಯೋಗವಾಗಿತ್ತು. ಅದೇ ಮಾದರಿಯಲ್ಲಿ ಆರಂಭವಾದ ಜನತಾದರ್ಶನ ಇದೀಗ ಮೂಲೆಗುಂಪಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಸಿ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಬಹಳ ಉಪಯುಕ್ತವಾಗಿತ್ತು ಸಣ್ಣಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದಂತಾಗಿತ್ತು. ಇದೇ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರದ ಜನತಾದರ್ಶನ ಕಾರ್ಯಕ್ರಮವೂ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ಹಲವು ತಿಂಗಳಿಂದ ಜನತಾದರ್ಶನ ಕಾರ್ಯಕ್ರಮದ ಸದ್ದೇ ಇಲ್ಲದಂತಾಗಿದೆ.
ಬಸವರಾಜು, ದೇವನಹಳ್ಳಿ
-------
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ದಿನೆ ದಿನೇ ಕಾವು ಪಡೆಯುತ್ತಲೇ ಇದೆ, ಉಸ್ತುವಾರಿ ಸಚಿವರು ರೈತರಿಗೆ ನ್ಯಾಯಕೊಡಿಸುತ್ತೇನೆ ಎಂದು ದಿನ ದೂಡುತ್ತಲೇ ಬರುತ್ತಿದ್ದಾರೆ. ಉಸ್ತುವಾರಿ ಸಚಿವರನ್ನು ಭೇಟಿಯಾಗುವುದೇ ಕಷ್ಟ ಎನ್ನುವಂತ ಪರಿಸ್ಥಿತಿ ಇದೆ. ಭೂಸ್ವಾಧೀನ ವಿಷಯ ಬಂದರೆ ಅಲ್ಲಿಂದ ಜಾರಿಕೊಳ್ಳುತ್ತಾರೆ. ನಾವು ಜನತಾದರ್ಶನ ಕಾರ್ಯಕ್ರಮ ಎದುರುನೋಡುತ್ತಿದ್ದೇವೆ.
ದಿನೇಶ್‌ಕುಮಾರ್, ಚನ್ನರಾಯಪಟ್ಟಣ