ಬೆಳಗಾವಿ: ಕರೊನಾ ವೈರಸ್ ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ನಗರ ಸೇರಿ ಜಿಲ್ಲಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ಅವಧಿಯಲ್ಲಿ ಜನರು ಮನೆಯಿಂದ ಹೊರಬಾರದ್ದರಿಂದ ಬೆಳಗಾವಿ ಸ್ತಬ್ಧಗೊಂಡಿತ್ತು.
ಬೆಳಗಿನ ಜಾವದಿಂದಲೇ ವಾಹನಗಳಿಂದ ಗಿಜುಗುಡುತ್ತಿದ್ದ, ನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆಟೋರಿಕ್ಷಾ ಹಾಗೂ ಖಾಸಗಿ ವಾಹನಗಳು ರಸ್ತೆಗಿಳಿಯಲಿಲ್ಲ. ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳು ತೆರೆಯಲಿಲ್ಲ. ಆಸ್ಪತ್ರೆ, ಔಷಧ ಅಂಗಡಿ, ಹಾಲು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.
ಬಸ್ ಸಂಚಾರವೂ ಬಂದ್: ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಶಾಂತವಾಗಿತ್ತು. ಶನಿವಾರ ರಾತ್ರಿ ಬೆಂಗಳೂರು ಮತ್ತು ಮೈಸೂರಿನಿಂದ ಹೊರಟಿದ್ದ ಎರಡು ಬಸ್‌ಗಳು ಭಾನುವಾರ ಬೆಳಗ್ಗೆ ಬೆಳಗಾವಿ ತಲುಪಿದವು. ಆ ಬಸ್‌ಗಳಲ್ಲಿ ಬಂದಿಳಿದ ಪ್ರಯಾಣಿಕರ ಬ್ಯಾಗ್‌ಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಲಾಯಿತು. ಕೈಗೆ ಸೈನಿಟೈಸರ್ ಹಾಕಲಾಯಿತು. ರೈಲು ಸೇವೆಯೂ ಸ್ಥಗಿತಗೊಂಡಿತ್ತು.
ಸೋಂಕು ನಿವಾರಕ ಔಷಧ ಸಿಂಪಡಣೆ: ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು 58 ವಾರ್ಡ್‌ಗಳ ವ್ಯಾಪ್ತಿಯ ಬಸ್ ತಂಗುದಾಣಗಳು, ದೇವಸ್ಥಾನಗಳು ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಿತು. ಪ್ರತಿ ಬಡಾವಣೆಯಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಕೈಗೊಂಡರು.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಮೂಲಕ ನಿತ್ಯ 1,587 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ನಗರ ವ್ಯಾಪ್ತಿಯಲ್ಲಿ 200ಕ್ಕಿಂತ ಅಧಿಕ ಬಸ್‌ಗಳು ಸಂಚರಿಸುತ್ತವೆ. ಜನತಾ ಕರ್ಫ್ಯೂ ಯಶಸ್ಸಿಗಾಗಿ ಇಡೀ ದಿನ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ. | ಕೆ.ಕೆ. ಲಮಾಣಿ, ವಿಭಾಗೀಯ ಸಂಚಾರ ಅಧಿಕಾರಿ, ಸಾರಿಗೆ ಸಂಸ್ಥೆ