ಬೆಂಗಳೂರು: ಕರೊನಾ ವೈರಸ್ ಸೋಂಕಿಗೆ ತಡೆನೀಡಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಆದೇಶ ನೀಡಿರುವ ಪರಿಣಾಮ ಬೆಂಗಳೂರಿನ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿದೆ. ಆದರೆ, ಇದೇ ಖಾಲಿ ರಸ್ತೆ ಯುವಕನೊಬ್ಬನ ಪ್ರಾಣವನ್ನು ತೆಗೆದುಕೊಂಡಿದೆ.
ಹೌದು, ಬಿಕೋ ಎನ್ನುತ್ತಿರುವ ರಸ್ತೆಯನ್ನು ನೋಡಿದ ಯುವಕನೊಬ್ಬ ತನ್ನ ಬೈಕ್ ಕ್ರೇಜ್ನಿಂದಾಗಿ ವೇಗದ ಚಾಲನೆ ಮಾಡಿ ಅಪಘಾತಕ್ಕೀಡಾಗಿದ್ದಾನೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಫ್ಲೈ ಓವರ್ ಮೇಲೆ ಘಟನೆ ನಡೆದಿದೆ.
ಯುವಕ ಹೆಸರು ಪತ್ತೆಯಾಗಿಲ್ಲ. ಬೌನ್ಸ್ ಬೈಕ್ನಲ್ಲಿ ಮೈಸೂರು ರಸ್ತೆಯಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ. ಟ್ರಾಫಿಕ್ ಇಲ್ಲದ ಕಾರಣ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುವಾಗ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. (ದಿಗ್ವಿಜಯ ನ್ಯೂಸ್)