ಜಿಲ್ಲೆ

ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿ - ಅಧ್ಯಕ್ಷ ಜೈಶಂಕರ್ ಮಾಹಿತಿ

Mangaluru - Hariprasad Rai



ಮಂಗಳೂರು : ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಖಾಯಂ ಜನತಾ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳನ್ನು ಅತ್ಯಂತ ಸರಳ ಮತ್ತು ಸುಲಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ಜನತಾ ನ್ಯಾಯಾಲಯದ ಅಧ್ಯಕ್ಷ ಹಾಗೂ ನ್ಯಾಯಾಧೀಶ ಜೈಶಂಕರ್ ತಿಳಿಸಿದರು.
ಜನತಾ ನ್ಯಾಯಾಲಯ ಕಚೇರಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಸದಸ್ಯರಿದ್ದಾರೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇಲ್ಲಿ ಅತಿ ಕಡಿಮೆ ಅವಧಿಯಲ್ಲಿ ಇತ್ಯರ್ಥ ಪಡಿಸಲಾಗುತ್ತಿದೆ . ಖಾಯಂ ಜನತಾ ನ್ಯಾಯಾಲಯವು
ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರೇ
ಸೇವೆಯಲ್ಲಿರುತ್ತಾರೆ. ಸರಳ ದಾಖಲೆ ಪ್ರಕ್ರಿಯೆ ಮತ್ತು ಅಗತ್ಯವಿದ್ದರೆ ಮಾತ್ರ ಸಾಕ್ಷಿ ವಿಚಾರಣೆ ನಡೆಯಲಿದೆ. ಯಾವುದೇ
ನ್ಯಾಯಾಲಯ ಶುಲ್ಕ ಇರುವುದಿಲ್ಲ ಎಂದು ಅವರು ತಿಳಿಸಿದರು.
ಸಾರಿಗೆ ಸೇವೆ, ಅಂಚೆ, ವಿದ್ಯುತ್, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ವಿಮೆ, ವೈದ್ಯಕೀಯ ನಿರ್ಲಕ್ಷೃತೆ ಮತ್ತಿತರ ಪ್ರಕರಣಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗುವುದು. ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ವಿವಿಧ ಸಾಲ ಸಂಬಂಧಿತ ವ್ಯಾಜ್ಯಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದು. ಇಲ್ಲಿನ ಆದೇಶವು ಅಂತಿಮವಾಗಿದ್ದು ಮೇಲ್ಮನವಿಗೆ ಅವಕಾಶವಿಲ್ಲ. 1 ಕೋಟಿ ರೂ.ವರೆಗಿನ ಮೊತ್ತದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಖಾಯಂ ಜನತಾ ನ್ಯಾಯಾಲಯವು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 6 ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದೆ. ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನೀಸಾ, ಖಾಯಂ ಜನತಾ ನ್ಯಾಯಾಲಯದ ಸದಸ್ಯರಾದ ಫಜಲ್ ರಹೀಮ್, ಲಾವಣ್ಯ ರೈ ಉಪಸ್ಥಿತರಿದ್ದರು.
.