ಜಿಲ್ಲೆ

ಜನತಾ ಬಜಾರ್ ಮಾರುಕಟ್ಟೆ ತೆರವು

Dharwad

ಹುಬ್ಬಳ್ಳಿ: ನಗರದ ಜನತಾ ಬಜಾರ್ ಮಾರುಕಟ್ಟೆ ಪ್ರದೇಶದ ಅಂಗಡಿ-ಮಳಿಗೆಗಳ ತೆರವು ಕಾರ್ಯಾಚರಣೆ ಬುಧವಾರ ಆರಂಭಗೊಂಡಿತು. ಒಂದಿಷ್ಟು ವಿರೋಧ, ತಕರಾರು ವ್ಯಕ್ತವಾದರೂ ಅಂಗಡಿಕಾರರು, ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಮಾರುಕಟ್ಟೆ ಪ್ರದೇಶವನ್ನು ಖಾಲಿ ಮಾಡಿ ಕೊಟ್ಟರು.

ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬೆಳಗ್ಗೆ 6 ಗಂಟೆಗೆ ಜೆಸಿಬಿ, ಟ್ರ್ಯಾಕ್ಟರ್​ಗಳೊಂದಿಗೆ ತೆರವು ಕಾರ್ಯಾಚರಣೆಗೆ ಆಗಮಿಸಿದ್ದರು. ಕಳೆದ 2-3 ದಿನಗಳಿಂದ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಜನತಾ ಬಜಾರ್ ಮಾರುಕಟ್ಟೆ ಪ್ರದೇಶದ ಅಂಗಡಿಕಾರರು, ವ್ಯಾಪಾರಿಗಳೊಂದಿಗೆ ಸರಣಿ ಸಭೆ ನಡೆಸಿದ್ದರು. ಸ್ಥಳಾಂತರ, ಪರ್ಯಾಯ ವ್ಯವಸ್ಥೆ ಬಗ್ಗೆ ರ್ಚಚಿಸಲಾಗಿತ್ತು.

ಇಂದು ಬೆಳಗ್ಗೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ನೇತೃತ್ವದಲ್ಲಿ ಪಾಲಿಕೆ-ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವ್ಯಾಪಾರಿಗಳು ತಮ್ಮ ಸಾಮಾನು ಸರಂಜಾಮುಗಳನ್ನು ಗಂಟುಮೂಟೆ ಕಟ್ಟಲು ಆರಂಭಿಸಿದರು. ಅಂಗಡಿ ಶೆಡ್​ಗಳನ್ನು ಬಿಚ್ಚಿ ಕಬ್ಬಿಣದ ರಾಡ್, ಕಟ್ಟಿಗೆ, ಮೇಲ್ಛಾವಣಿ ಶೀಟ್​ಗಳನ್ನು ಆಟೋ, ಟ್ರ್ಯಾಕ್ಟರ್​ಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಸುಮಾರು 2-3 ತಾಸು ಈ ಕೆಲಸದಲ್ಲಿಯೇ ವ್ಯಾಪಾರಿಗಳು ತೊಡಗಿದ್ದರು.

ಹಠಾತ್ ಪ್ರತಿಭಟನೆ: ಸ್ಥಳಾಂತರಗೊಳ್ಳುವ ವ್ಯಾಪಾರಿಗಳು ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೊಟೇಲ್ ಪಕ್ಕ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲವೆಂದು ಹಾಗೂ ಹೈಕೋರ್ಟ್ ಆದೇಶವೊಂದನ್ನು ಹಿಡಿದು ಹಠಾತ್ ಪ್ರತಿಭಟನೆ ನಡೆಸಿದರು. ಕೋವಿಡ್ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಸ್ಥಳಾಂತರ ಹಾಗೂ ನೆಲಸಮಗೊಳಿಸುವ ಪ್ರಕ್ರಿಯೆಗಳನ್ನು ನ. 29ರವರೆಗೆ ಮುಂದೂಡಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆಯೆಂದು ಪ್ರತಿಭಟನಾಕಾರರು ವಾದಿಸಿದ್ದರು.

ಬಹಳಷ್ಟು ಜನ ವ್ಯಾಪಾರಿಗಳು ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಸ್ಥಳವನ್ನು ನೋಡಿ ಬಂದಿದ್ದಾರೆ. ಅಲ್ಲಿ ಏನೂ ವ್ಯವಸ್ಥೆ ಆಗಿಲ್ಲ. 8-10 ಜನ ಕುಳಿತುಕೊಳ್ಳಲಷ್ಟೇ ಶೆಡ್ ಹಾಕಲಾಗಿದೆ. ಉಳಿದಂತೆ ಏನೂ ಮಾಡಿಲ್ಲ. ತರಕಾರಿ, ಹೂವು-ಹಣ್ಣು, ದಿನಸಿ, ಇನ್ನಿತರ ವಸ್ತುಗಳನ್ನು ಎಲ್ಲಿ? ಹೇಗೆ? ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು. ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಪಾಲಿಕೆ ಉಪ ಆಯುಕ್ತ (ಕಂದಾಯ) ಎಂ.ಬಿ. ಸಬರದ ಹಾಗೂ ಪೋಲಿಸ್ ಇನ್ಸ್​ಪೆಕ್ಟರ್ ಹೊಳೆಯಣ್ಣವರ ಮನವರಿಕೆ ಮಾಡುತ್ತಿದ್ದರು.

‘ಅಂಗಡಿ ಖಾಲಿ ಮಾಡಲು ನಮ್ಮದೇನೂ ವಿರೋಧವಿರಲಿಲ್ಲ. ನಾವು ಸ್ವಯಂಪ್ರೇರಣೆಯಿಂದ ತೆರವು ಮಾಡಲು ಮುಂದಾಗಿದ್ದೇವು. ಏಕಾಏಕಿ ಜೆಸಿಬಿ ಒಳಗೆ ನುಗ್ಗಿಸಿದರೆ ಹೇಗೆ? ಪರ್ಯಾಯ ವ್ಯವಸ್ಥೆಯೂ ಸರಿಯಾಗಿ ಇಲ್ಲ’ ಎಂದು ಜನತಾ ಬಜಾರ್ ಅಂಗಡಿಕಾರರ ಸಂಘದ ಅಧ್ಯಕ್ಷ ಮೊಹಮ್ಮದ್ ರಫೀಕ್ ಹೇಳಿದರು.

ಯಾವ ಜನಪ್ರತಿನಿಧಿಗಳು, ಪಾಲಿಕೆಯ ಮಾಜಿ ಸದಸ್ಯರು ಜನತಾ ಬಜಾರ್​ನತ್ತ ಸುಳಿಯಲಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಪ್ರತಿಭಟನಾಕಾರರು ಆಗಾಗ ಘೊಷಣೆ ಕೂಗಿದರು.

ಸುಮಾರು 1 ತಾಸು ವಾಗ್ವಾದ ಬಳಿಕ ಅಂಗಡಿಕಾರರು ಸ್ವಯಂ ತೆರವು ಕಾರ್ಯ ಮುಂದುವರಿಸಿದರು. ಸಂಜೆಯವರೆಗೂ ಸಾಮಾನುಗಳನ್ನು ಸಾಗಿಸುತ್ತಿದ್ದರು. ಸಾಮಾನು-ಸರಂಜಾಮುಗಳನ್ನು ಸಾಗಿಸಲು ಅಂಗಡಿಕಾರರಿಗಾಗಿಯೇ ಪಾಲಿಕೆ 4 ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿತ್ತು.

ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಸಹಾಯಕ ಆಯುಕ್ತರಾದ ಎಸ್.ಸಿ. ಬೇವೂರ, ಬಿ. ಮನೋಹರ, ಸ್ಮಾರ್ಟ್ ಸಿಟಿ ಲಿಮಿಟೆಡ್ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ಇತರರು ಇದ್ದರು.

ಸ್ಮಾರ್ಟ್​ಸಿಟಿ ಯೋಜನೆಯ 18.35 ಕೋಟಿ ರೂ. ವೆಚ್ಚದಲ್ಲಿ ಜನತಾ ಬಜಾರ್ ಮಾರುಕಟ್ಟೆಯಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಣವಾಗಲಿದೆ. 18 ತಿಂಗಳ ಅವಧಿಯಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಹೇಳಿದೆ. ಮೇ. ಎಸ್​ಕೆಎಸ್ ಕಾರ್ಕಳ ಇನ್ಪ್ರಾ ಪ್ರಾಜೆಕ್ಟ್ಸ್ ಪ್ರೖೆವೇಟ್ ಲಿಮಿಟೆಡ್ ಗುತ್ತಿಗೆ ಪಡೆದಿದೆ.

ಪೂರ್ಣಗೊಂಡಿರಲಿಲ್ಲ ಪರ್ಯಾಯ ವ್ಯವಸ್ಥೆ

ಜನತಾ ಬಜಾರ್​ನಿಂದ ಸ್ಥಳಾಂತರಗೊಂಡ ಮಳಿಗೆದಾರರಿಗಾಗಿ ಹೊಸೂರು ಬಳಿ ಹೊಸದಾಗಿ 51 ಮಳಿಗೆಗಳನ್ನು ಕಟ್ಟಿಸಿಕೊಡಲಾಗಿದೆ. ಶೌಚಗೃಹ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಕ್ಲಾರ್ಕ್ಸ್ ಇನ್ ಹೋಟೆಲ್ ಬಳಿ ಪರ್ಯಾಯ ವ್ಯವಸ್ಥೆ ಪೂರ್ಣಗೊಂಡಿರಲಿಲ್ಲ.

ತರಕಾರಿ, ಹೂವು-ಹಣ್ಣು ವ್ಯಾಪಾರಿಗಳಿಗೆ ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ಅಲ್ಲಿಗೆ ಹೋಗಿ ವ್ಯಾಪಾರಕ್ಕೆ ಕುಳಿತುಕೊಳ್ಳುವಂಥ ಪರಿಸ್ಥಿತಿ ಇರಲಿಲ್ಲ. ಶೌಚಗೃಹ ನಿರ್ಮಾಣ ಹಾಗೂ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದ್ದವು.