ವಿಜಯಪುರ : ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಜನತಾ ನ್ಯಾಯಾಲಯವು ರಾಜೀ ಸಂಧಾನದ ಮೂಲಕ ಶನಿವಾರ ಒಂದು ಮಾಡಲಾಯಿತು. ಇದು ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕೆಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಸಿಂದಗಿ ತಾಲೂಕಿನ ನ್ಯಾಯಾಲಯದಲ್ಲಿ ಕಳೆದ 23 ವರ್ಷಗಳಿಂದ ಬಾಕಿ ಇದ್ದ ಪಾಲುವಾಟನಿ ದಾವೆ ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು. ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಆಸ್ತಿಯ ವಿಭಾಗ ಕೋರಿದ 114 ದಾವೆಗಳು, 94 ಚೆಕ್‌ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 54 ಪ್ರಕರಣಗಳು ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 6,259 ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿವೆ. ಅದರಿಂದ ಸರ್ಕಾರಕ್ಕೆ ಹಾಗೂ ಕಕ್ಷಿದಾರರಿಗೆ ಪರಿಹಾರಧನ ಒದಗಿಸಲಾಯಿತು.
ಅದರಂತೆ 40,302 ವ್ಯಾಜ್ಯ ಪೂರ್ವ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿವೆ. ಜನತಾ ನ್ಯಾಯಾಲಯದ ಯಶಸ್ವಿಗೆ ಸಹಕರಿಸಿದ ಎಲ್ಲ ವಕೀಲರುಗಳಿಗೆ, ಕಕ್ಷಿದಾರರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಜನತಾ ನ್ಯಾಯಾಲಯದ ಬಗ್ಗೆ ಪ್ರಚಾರದಲ್ಲಿ ಸಹಭಾಗಿಯಾದ ಕಾನೂನು ಪದವಿ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಪೆನಲ್ ವಕೀಲರುಗಳಿಗೆ, ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಅವರು ಶ್ಲಾಘಿಸಿದರು.