ಜಿಲ್ಲೆ

ಜನಸ್ನೇಹಿ ಆಡಳಿತ ಬಲಪಡಿಸಲು ಮುಂದಾದ ಡಿಸಿ

ತುಮಕೂರು: ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸಾಗುವಳಿ ಚೀಟಿ, ಬಗರ್​ ಹುಕುಂ, ಆಧಾರ್​ ಸೀಡಿಂಗ್​, ಪಿಂಚಣಿ, ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್​ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತವನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ವಿಳಂಬ ಮಾಡದೆ ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಖಡಕ್​ ಸೂಚನೆ ನೀಡಿದರು.

ಜಿಲ್ಲೆಯು ಆಧಾರ್​ ಸೀಡಿಂಗ್​ನಲ್ಲಿ ಶೇಕಡಾ 85.9 ಗುರಿ ಸಾಧಿಸಿದ್ದು, ಬಾಕಿ ಇರುವ ಆಧಾರ್​ ಸೀಡಿಂಗ್​ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಬಗರ್​ ಹುಕುಂ ಸಂಬಂಧಿಸಿದಂತೆ 496, ಸಕಾಲಕ್ಕೆ ಸಂಬಂಧಿಸಿದಂತೆ 281, ಪಿಂಚಣಿ 1284, ಆರ್​ಟಿಸಿ ತಿದ್ದುಪಡಿ 2932 ಅರ್ಜಿಗಳು ಬಾಕಿ ಇದ್ದು ಕಾನೂನು ತೊಡಕಿಲ್ಲದ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡುವಂತೆ ತಿಳಿಸಿದರು.

ಸಾಗುವಳಿ ಮಾಡುತ್ತಿರುವ ದುರಸ್ತಿಯಾಗದ ಸರ್ಕಾರಿ ಭೂಮಿ(ನಮೂನೆ 1-5)ಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿ ದಿನ ಸುಮಾರು 10 ಗ್ರಾಮಗಳ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕು. ಉಪವಿಭಾಗಾಧಿಕಾರಿಗಳ ಸಿಬ್ಬಂದಿ ವರ್ಗ ಗ್ರಾಮವಾರು, ಹೋಬಳಿವಾರು ಭೇಟಿ ನೀಡಿ ಪರಿಶೀಲಿಸಿ, ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಪಿಂಚಣಿ ಅದಾಲತ್​ ಆಂದೋಲನ: ಮುಂದಿನ ವಾರದಿಂದ ಜಿಲ್ಲೆಯ ಪ್ರತಿ ಗ್ರಾಪಂ ಪಿಂಚಣಿ ಅದಾಲತ್​ ಆಂದೋಲನ ಹಮ್ಮಿಕೊಳ್ಳಬೇಕು. ಅದಾಲತ್​ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಟೋ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಪ್ರತಿ ಮನೆಗೂ ಭೇಟಿ ನೀಡಿ ಪಿಂಚಣಿ ಸೌಲಭ್ಯದಿಂದ ವಂಚಿತರಾದ ಫಲಾನುಭವಿಗಳಿದ್ದಲ್ಲಿ ಪತ್ತೆ ಹಚ್ಚಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್​. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್​ ಕುಮಾರ್​ ಶೆಟ್ಟಿ, ಚುಣಾವಣೆ ತಹಶೀಲ್ದಾರ್​ ರೇಷ್ಮಾ, ತಹಶೀಲ್ದಾರಗಳಾದ ರಾಜೇಶ್ವರಿ, ವರದರಾಜು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.