ಜಿಲ್ಲೆ

ಜನಸೇವೆಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ, ಸಚಿವ ಎಂಟಿಬಿ ಪ್ರಾರ್ಥನೆ, ಹುಟ್ಟುಹಬ್ಬಕ್ಕೆ ಸೀರೆಗಳ ಉಡುಗೊರೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಿಂದಿನಿಂದಲೂ ಎಂಟಿಬಿ ಚಾರಿಟಬಲ್ ಟ್ರಸ್ಟ್ ಮೂಲಕ ಜನಸೇವೆ ಮಾಡಿಕೊಂಡು ಬಂದಿದ್ದೇವೆ, ಜನಸೇವೆಗಾಗಿಯೇ ರಾಜಕೀಯ ಪ್ರವೇಶಿಸಿದ್ದೇನೆ, ನನ್ನ ಶಕ್ತಿಗೂ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ, ಮುಂದಿನ ದಿನಗಳಲ್ಲೂ ಜನಸೇವೆಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಗರುಡಾಚಾರ್‌ಪಾಳ್ಯದಲ್ಲಿ ಭಾನುವಾರ ಹುಟ್ಟುಹಬ್ಬದ ಪ್ರಯುಕ್ತ ಜನರಿಗೆ ಸೀರೆ, ಸಿಹಿ ವಿತರಿಸಿ ಮಾತನಾಡಿದರು. ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಇಂಗಿತ ನನಗಿಲ್ಲ, ಆದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳ ಅಭಿಮಾನಕ್ಕೆ ಕಟ್ಟುಬಿದ್ದು ಆಚರಿಸಿಕೊಳ್ಳುತ್ತಿದ್ದೇನೆ, ಆದರೆ ನನ್ನ ಹುಟ್ಟುಹಬ್ಬ ಸಾಮಾಜಿಕ ಕಾರ್ಯಗಳಿಗೆ ನೆರವಾಗಬೇಕು ಎಂಬ ಉದ್ದೇಶದೊಂದಿಗೆ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ತಾಲೂಕಿನ ಶಾಲಾ-ಕಾಲೇಜು ಮಕ್ಕಳಿಗೆ ನೋಟ್‌ಬುಕ್ ವಿತರಣೆ, ಬಡ ಕುಟುಂಬಕ್ಕೆ ಕಂಬಳಿ, ಸೀರೆ ವಿತರಣೆ ಮಾಡಲಾಗಿದೆ ಎಂದರು. ಇದ್ಯಾವುದೂ ತೋರಿಕೆಗಾಗಿ ಮಾಡುವುದಲ್ಲ, ದೇವರು ಸಂಪತ್ತು ಕೊಟ್ಟಿದ್ದಾನೆ, ಜನ ಅಧಿಕಾರ ನೀಡಿದ್ದಾರೆ, ಅವರಿಗೆ ನನ್ನ ಕೈಲಾದ ನೆರವು ನೀಡಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು.


ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದ ಬಡವರು, ಕೂಲಿಕಾರ್ಮಿಕರು ಸಾಕಷ್ಟು ತೊಂದರೆ ಎದುರಿಸಿದ್ದಾರೆ, ಕೋವಿಡ್ ಪರಿಸ್ಥಿತಿಯಿಂದ ಹೊರಬಂದು ಜನ ಸುಧಾರಿಸಿಕೊಳ್ಳುತ್ತಿದ್ದಾರೆ, ಮತ್ತೊಮ್ಮೆ ಇಂಥ ಸಂದಿಗ್ಧ ಪರಿಸ್ಥಿತಿ ಎದುರಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ತಂದೆಯವರ ಮಾರ್ಗದರ್ಶನ: ತಂದೆಯವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಹರಿದು ಬಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಕಂಡು ನನಗೆ ಹೆಮ್ಮೆ ಎನಿಸಿತು. ಜನರು ತಂದೆಯವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಚಿವರ ಪುತ್ರ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ಭಾವುಕರಾದರು.


ತಂದೆಯವರ ಹುಟ್ಟುಹಬ್ಬದ ಪ್ರಯುಕ್ತ ಗರುಡಾಚಾರ್‌ಪಾಳ್ಯ ವಾರ್ಡ್‌ನ 6 ಸಾವಿರಕ್ಕೂ ಹೆಚ್ಚು ಬಡಕುಟುಂಬದವರಿಗೆ ಸೀರೆಯೊಂದಿಗೆ ಸಿಹಿ ವಿತರಿಸಲಾಗಿದೆ, ಎಲ್ಲರಿಗೂ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಜನರು ಸಂತಸದಿಂದ ಆಶೀರ್ವದಿಸಿದರೆ ನಮ್ಮ ಕಾರ್ಯವನ್ನು ದೇವರು ಮೆಚ್ಚಿದಂತೆ ಎಂದು ಹೇಳಿದರು. ತಂದೆಯವರ ಮಾರ್ಗದರ್ಶನ ಅವರ ಜನರೊಂದಿಗೆ ನಡೆದುಕೊಳ್ಳುವ ರೀತಿಯೇ ನನಗೆ ಮಾರ್ಗದರ್ಶನವಾಗಿದೆ ಎಂದರು.
ಬೃಹತ್ ಕೇಕ್ ಕತ್ತರಿಸಿ ಶುಭಾಶಯ:

ಗರುಡಾಚಾರ್‌ಪಾಳ್ಯದ ಸಚಿವರ ಸ್ವಗೃಹದ ಆವರಣದಲ್ಲಿ ಅಭಿಮಾನಿಗಳು ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಸಚಿವರಿಗೆ ಶುಭಾಶಯ ಕೋರಿದರು, ಬೃಹತ್ ಹಾರಗಳನ್ನು ಹಾಕಿ ಸಚಿವ ದಂಪತಿಯನ್ನು ಮೆರವಣಿಗೆ ಮಾಡಲಾಯಿತು.