ಜಿಲ್ಲೆ

ಮಹಿಳೆಯರಾಗಲಿ ನಾಡಿನ ಸಾಂಸ್ಕೃತಿಕ ರಾಯಭಾರಿ...

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ

ಜನಪದ ಉತ್ಸವ ಜನ ಜಲ್ಸಾ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಮ್ಮ ನಾಡು, ನುಡಿ, ಸಂಸ್ಕೃತಿ ವೈವಿಧ್ಯಮಯವಾಗಿದ್ದು, ವಿವಿಧ ಸಂಪ್ರದಾಯದ ರೀತಿ ಅರಿತು ಜೀವನ ನಡೆಸಬೇಕು. ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರೇ ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯ ಲೀಡ್​ ಕಾಲೇಜು ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಐಕ್ಯುಎಸಿ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಮಾ.21ರಂದು ಆಯೋಜಿಸಿದ್ದ ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ ಜನಪದ ಉತ್ಸವ ಜನ ಜಲ್ಸಾ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುರು-ಹಿರಿಯರನ್ನು ಗೌರವಿಸಿ

ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಉತ್ತಮ ಗುರಿ ಹೊಂದಿರಬೇಕು. ಗುರಿ ಉತ್ತಮವಾಗಿರಬೇಕಾದರೆ ಉತ್ತಮ ಸಂಸ್ಕೃತಿ ಹೊಂದಿರಬೇಕು. ಗುರು-ಹಿರಿಯರನ್ನು ಗೌರವಿಸಿದಾಗ, ಅವರ ಮಾರ್ಗದರ್ಶನದಲ್ಲಿ ಮನ್ನಡೆದಾಗ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರಪ್ರಸಾದ ಕೆ. ಅಧ್ಯಕ್ಷತೆ ವಹಿಸಿದ್ದರು. ಸಾಫಲ್ಯ ಟ್ರಸ್ಟ್​ನ ನಿರ್ದೇಶಕಿ ನಿರುಪಮಾ ಪ್ರಸಾದ, ಖ್ಯಾತ ಬರಹಗಾರ್ತಿ ವಸಂತಿ ಶೆಟ್ಟಿ ಬ್ರಹ್ಮವಾರ, ಕಾಲೇಜಿನ ಐಕ್ಯುಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಾಣಿಜ್ಯ ನಿಕಾಯದ ಡೀನ್​ ಗೌರಿ ಎಸ್​. ಭಟ್ಟ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಪ್ರೊ. ನಿಕೇತನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾ ಎಸ್​.ಎನ್​. ವಂದಿಸಿದರು.

ಸಂಭ್ರಮಿಸಿದ ವಿದ್ಯಾರ್ಥಿನಿಯರು

ಜನಪದ ಸಾಂಸ್ಕೃತಿಕ ವೈಭವದಲ್ಲಿ ವಿದ್ಯಾರ್ಥಿನಿಯರು ಜನಪದ ನೃತ್ಯ ಹಾಗೂ ಜನಪದ ಹಾಡುಗಳನ್ನು ಹೇಳಿದರು. ಕಾಲೇಜಿನ ಎಲ್ಲ ಕೋಣೆಗಳನ್ನು ಜನಪದ ವಸ್ತುಗಳನ್ನಿಟ್ಟು ಅಲಂಕರಿಸಿದ್ದರು. ಎಲ್ಲ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಸಾಂಸ್ಕೃತಿಕ ಉಡುಗೆ ತೊಟ್ಟು ಜನಪದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಿಂದಲೇ ಜನಪದ ಶೈಲಿಯ ಹಾಗೂ ಸಾಂಪ್ರದಾಯಿಕ ರುಚಿಕರ ತಿಂಡಿ-ತಿನಿಸು ತಯಾರಿಸಿ, ಮಾರಾಟ ಮಾಡಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಖರೀದಿ ಮಾಡಿದರು.