ಹುಬ್ಬಳ್ಳಿ: ಪಾಲಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ತಿಳಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಕೈ ಜೋಡಿಸಬೇಕೆಂದು ವಿವೇಕ ಜಾಗ್ರತ ಬಳಗದ ದೀಪ ಶಿಕ್ಷಕಿ ಅಪರ್ಣಾ ಕಮ್ಮಾರ ಹೇಳಿದರು.
ಇಲ್ಲಿಯ ಭೈರಿದೇವರಕೊಪ್ಪದ ಜಾನಪದ ಜಗಲಿ ಕಲ್ಪತರುದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ವಿವೇಕ ಜಾಗ್ರತ ಬಳಗ, ಜನಪದರು ಕರ್ನಾಟಕ ಜನಪದ ಜಗತ್ತು ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ ಶ್ರಾವಣ ಸತ್ಸಂಗ, ಜಾನಪದ ಕಾರ್ಯಕ್ರಮದಲ್ಲಿ ಶ್ರಾವಣ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು.
ಶ್ರಾವಣ ಮಾಸವು ಹಬ್ಬಗಳ ಸರಮಾಲೆಯಾಗಿದ್ದು, ಹಿರಿಯರು ಈ ಎಲ್ಲ ಹಬ್ಬಗಳ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿ ಹೇಳಬೇಕೆಂದರು. ಬದುಕಿನ ಸಾರ್ಥಕತೆಗೆ ವೇದ, ಉಪನಿಷತ್, ವಚನಗಳು, ಧಾರ್ಮಿಕ ಗ್ರಂಥಗಳ ಅಧ್ಯಯನ ಅತೀ ಅವಶ್ಯವಾಗಿದೆ ಎಂದರು.
ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ, ಹಿರಿಯರು ಊಟ, ಉಪಹಾರ ಮತ್ತು ಆರೋಗ್ಯ ರಣೆಗೆ ಮಹತ್ವ ನೀಡಿರುವ ವಿವರಗಳನ್ನು ಜಾನಪದ ಹಾಡುಗಳ ಮೂಲಕ ತಿಳಿಸಿದರು. ಒಳ್ಳೆಯ ಕುಟುಂಬಗಳಿಂದ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದರು.
ನಳಿನಾ ಶಶಿಕಾಂತ ಕರ್ಕಿ ಶ್ರಾವಣ ಮಾಸದ ಮಹತ್ವ ಕುರಿತು ಮಾತನಾಡಿದರು.
ಬಳಗದ ಅಧ್ಯಕ್ಷ ಕಲ್ಲಪ್ಪ ಮರದಣ್ಣವರ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಹೂಲಿ ಸ್ವಾಗತಿಸಿದರು, ಸಾಮೂಹಿಕವಾಗಿ ಶ್ರೀರಾಮ ರಾ ಸ್ತೋತ್ರವನ್ನು ಪಠಿಸಲಾಯಿತು. ಏಕನಾಥ ಕಲಬುರ್ಗಿ ಅತಿಥಿಗಳನ್ನು ಪರಿಚಯಿಸಿದರು. ಎಂ. ಸುಭಾಸ ಅವರು ಅಕ್ಯುಪಂಕ್ಚರ್ ಆರೋಗ್ಯ ಮಾಹಿತಿ ನೀಡಿದರು. ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು.