ಮಂಡ್ಯ: ಮಹದೇಶ್ವರ, ಮಂಟೇಸ್ವಾಮಿ, ಸವದತ್ತಿ ಎಲ್ಲಮ್ಮದೇವಿ, ಮೈಲಾರಲಿಂಗನ ಕಾವ್ಯಗಳ ಹೂರಣ, ಕುರುಕುರು ಮಾಮನ ಹಾಡು, ಲಾವಣಿ, ಸೋಬಾನೆ ಮತ್ತು ರಾಗಿ ಬೀಸುವ ಪದಗಳನ್ನು ಕಟ್ಟಿ ಹಾಡಿದ ವೈಭವ. ಹೀಗೆ, ಒಂದೇ ಎರಡೇ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಎರಡನೇ ದಿನವಾದ ಶನಿವಾರ ಕಲಾವಿದರ ಕಲೆಯ ಶ್ರೀಮಂತಿಕೆ ಅನಾವರಣಗೊಂಡಿತು. ಆದರೂ ಇಂತಹ ವಿಶೇಷ ಅನುಭವ ನೀಡಿದ ಜಾನಪದ ಕಾರ್ಯಕ್ರಮ ಮುಕ್ತಾಯವಾಯಿತೆಂಬ ಬೇಸರ ಎಲ್ಲರನ್ನೂ ಕಾಡುವಂತಾಯಿತು.
ಜಾನಪದ ಸಮ್ಮೇಳನದ ಎರಡನೇ ದಿನವನ್ನು ಕಲಾವಿದರಿಗೆ ಮೀಸಲಿಡಲಾಯಿತು. ವಿವಿಧೆಡೆಯಿಂದ ಆಗಮಿಸಿದ ಕಲಾವಿದರು ತಮ್ಮ ಪ್ರದರ್ಶನದ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸಿದರು. ಮಾತ್ರವಲ್ಲದೆ ಯಾವುದೇ ಅಡೆತಡೆಯಿಲ್ಲದಂತೆ ನಿರರ್ಗಳವಾಗಿ ಕಾವ್ಯ, ಹಾಡು, ನೃತ್ಯದ ಮೂಲಕ ನಮ್ಮ ಜಾನಪದ ಎಷ್ಟೊಂದು ಸುಂದರವಾಗಿದೆ ಎನ್ನಿಸುವಂತೆ ಮಾಡಿತು. ಆಧುನಿಕತೆಯ ಅಬ್ಬರದಲ್ಲಿ ಕಳೆದುಹೋಗಿರುವ ಇಂದಿನ ಜನರ ಮನಸ್ಸಿನಲ್ಲಿ ನಮ್ಮ ಜಾನಪದ ಸಾಹಿತ್ಯದ ಬಗ್ಗೆ ಹೆಮ್ಮೆ ಮೂಡಿಸಿತು. ಜತೆಗೆ ಪ್ರದರ್ಶನದ ವೇಳೆ ಪ್ರೇಕ್ಷಕರು ತಮಗರಿವಿಲ್ಲದಂತೆ ಕಲೆಗೆ ಸೋತು ಹೋದರು. ಜತೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕೆಂದು ಅಭಿಪ್ರಾಯಗಳು ಕೇಳಿಬಂದವು.
ಶನಿವಾರ ಸ್ಥಳೀಯ ಕಲಾವಿದರಿಂದ ಜಾನಪದ ಗೀತ ಗಾಯನ ನಡೆಯಿತು. ಬಳಿಕ ಚಿತ್ರದುರ್ಗ ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ‘ಜಾನದಪ ಕಾವ್ಯಗಳ ರಸಗ್ರಹಣ ವ್ಯಾಖ್ಯಾನ ಹಾಗೂ ಗಾಯನ’ ನಡೆಯಿತು. ಕಲಾವಿದರು ಪೈಪೋಟಿಗೆ ಬಿದ್ದವರಂತೆ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.
ಖ್ಯಾತ ಜಾನಪದ ಗಾಯಕ ಡಾ.ಮಹದೇವಸ್ವಾಮಿ ಮಳವಳ್ಳಿ ಮತ್ತು ತಂಡದಿಂದ ‘ಮಹದೇಶ್ವರ ಕಾವ್ಯ’ವನ್ನು ಹೇಳುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮೈಸೂರಿನ ಡಾ.ಗುರುರಾಜ್ ಮತ್ತು ತಂಡದಿಂದ ‘ಮಂಟೇಸ್ವಾಮಿ ಕಾವ್ಯದ ಕಲ್ಯಾಣ ಪಟ್ಟಣದ ಸಾಲು’, ರಾಯಚೂರಿನ ಉಸ್ಮಾನ್ ಮತ್ತು ತಂಡದಿಂದ ‘ಜನಪದ ತತ್ವಪದ’, ರಾಮನಗರದ ಕರಿಯಪ್ಪನದೊಡ್ಡಿ ಮಲ್ಲಯ್ಯ ಮತ್ತು ಸಂಗಡಿಗರಿಂದ ‘ಮೈಲಾರಲಿಂಗನ ಕಾವ್ಯ’, ಚಿಕ್ಕಬಳ್ಳಾಪುರ ಜಿ.ಮುನಿರೆಡ್ಡಿ ಮತ್ತು ತಂಡದಿಂದ ‘ಕುರುಕುರು ಮಾಮನ ಹಾಡು’, ಮಂಡ್ಯ ವಳಗೆರೆಹಳ್ಳಿ ಲೋಕೇಶ್ ಅವರಿಂದ ‘ಜನಪದ ಗೀತೆ’, ಬಳ್ಳಾರಿ ಮಾತಾ ಮಾಯಮ್ಮ ಜೋಗತಿ ಅವರಿಂದ ‘ಸವದತ್ತಿ ಎಲ್ಲಮ್ಮ ಕಾವ್ಯದ ಚೌಡಿಕೆ ಪದ’, ಗಾಮನಹಳ್ಳಿ ಸ್ವಾಮಿ ಅವರಿಂದ ‘ಚುಂಚನಗಿರಿ ಭೈರವನ ಕಾವ್ಯದ ಅರ್ಜುನಜೋಗಿ ಹಾಡು’, ಹಾಸನದ ದೇವಾನಂದ ವರಪ್ರಸಾದ್ ತಂಡದಿಂದ ‘ಬಿಳಿಗಿರಿರಂಗಪ್ಪನ ಕಾವ್ಯದ ಸಾಲು’, ಬಾಗಲಕೋಟೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ ತಂಡದಿಂದ ‘ಲಾವಣಿ’, ತುಮಕೂರಿನ ಎನ್.ಮೋಹನ್‌ಕುಮಾರ್ ತಂಡದಿಂದ ‘ಕಾಡುಗೊಲ್ಲರ ಜುಂಜಪ್ಪನ ಕಾವ್ಯ’, ಮೈಸೂರು ಜಯಶಂಕರ್ ತಂಡದಿಂದ ‘ಮಹದೇಶ್ವರರ ಕಾವ್ಯ ಕಾರಯ್ಯ ಬಿಲ್ಲಯ್ಯ ಪ್ರಸಂಗ’ ಮತ್ತು ಚೈತ್ರಾ ತಂಡದಿಂದ ಸೋಬಾನೆ ಹಾಗೂ ರಾಗಿ ಬೀಸುವ ಪದಗಳನ್ನು ಹೇಳಲಾಯಿತು.
ಇದರೊಟ್ಟಿಗೆ ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ನಡೆಯಿತು. ಸಮಯದ ಬಗ್ಗೆ ತಲೆಕೆಡಿಸಿಕೊಳ್ಳದೇ, ತಮ್ಮ ಹಾವಭಾವದ ಮೂಲಕ ಪ್ರೇಕ್ಷಕರನ್ನು ಜಾನಪದದ ಲೋಕಕ್ಕೆ ಕರೆದುಕೊಂಡು ಹೋದರು. ಕೂಗಿ, ಕುಣಿಯೋದು ಜಾನಪದ ಎನ್ನುವುದನ್ನು ಹೇಳಿದರು.