ಜಿಲ್ಲೆ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಜಾನಪದ ಹಬ್ಬ

ಸುನಿಲ್ ಪೊನ್ನೇಟಿ

ಮಡಿಕೇರಿ:

ತನ್ನದೇ ಆದ ಜಾನಪದ ಸಿರಿ ಸಂಪತ್ತಿನ ಮೂಲಕ ಕೊಡಗು ಕರ್ನಾಟಕದಲ್ಲೇ ವಿಶಿಷ್ಟ ಸ್ಥಾನ ಗಳಿಸಿದೆ ಎಂದು ಹಿರಿಯ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಹೇಳಿದರು. ಮಡಿಕೇರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಜಾನಪದ ಹಬ್ಬ ಕಾರ್ಯಕ್ರಮವನ್ನು ಒನಕೆಯಿಂದ ಭತ್ತ ಕುಟ್ಟಿ, ಬೀಸುವ ಕಲ್ಲಿನಲ್ಲಿ ಅಕ್ಕಿ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಜಾನಪದ ಪರಂಪರೆಯಲ್ಲಿ ಕೋಲಾಟ, ಕಂಸಾಳೆ, ಯಕ್ಷಗಾನ, ಡೊಳ್ಳುಕುಣಿತ, ಸುಗ್ಗಿಕುಣಿತ ಮುಂತಾದ ಕಲೆಗಳನ್ನು ಕಾಣಬಹುದಾಗಿದೆ. ನಾವು ದಿನನಿತ್ಯ ಬಳಸುತ್ತಿದ್ದ ಬೀಸುವ ಕಲ್ಲು, ರಾಗಿ ಕಲ್ಲು, ರಾಟೆ ಇವೆಲ್ಲಾ ಮಾಯವಾಗಿದೆ.

ಅವುಗಳ ಸ್ಥಾನವನ್ನು ಆಧುನಿಕ ವಸ್ತುಗಳು ಆಕ್ರಮಿಸಿಕೊಂಡಿದೆ. ಜನಪದರಲ್ಲಿ ಮನುಷ್ಯ ಪ್ರೀತಿ, ಸಮಾಜದ ಮೇಲಿನ ಕಾಳಜಿಯನ್ನು ವಿಶೇಷವಾಗಿ ಕಾಣಬಹುದು. ಮೌಖಿಕ ಪರಂಪರೆ ಮಾಯವಾಗಿ ಲಿಖಿತ ಪರಂಪರೆ ಬಂದಿರುವ ಈ ಹೊತ್ತಿನಲ್ಲಿ ಜನಪದವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರನ ಸರಸ್ವತಿ ಪ್ರಕಾಶ್ ಮಾತನಾಡಿ, ಮೌಖಿಕ ಪರಂಪರೆ ಬಾಯಿಯಿಂದ ಬಾಯಿಗೆ ಹರಿದು ಬರುವಂಥದ್ದು. ಗಾದೆ, ಒಗಟು, ಸೋಬಾನೆ ಹಾಡುಗಳು, ಕಥೆಗಳು, ಕುಣಿತಗಳು, ಆಟಗಳು ಹೀಗೆ ಹಲವು ಪ್ರಾಕಾರಗಳನ್ನು ಮೌಖಿಕ ಪರಂಪರೆ ಒಳಗೊಂಡಿದೆ. ನಮ್ಮ ಜೀವನಾವರ್ತ ಮತ್ತು ವಾರ್ಷಿಕಾವರ್ತದ ಎಲ್ಲಾ ಆಚರಣೆಗಳನ್ನು ಜಾನಪದ ಒಳಗೊಂಡಿದೆ. ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕಿದೆ ಎಂದರು.

ಜನಪದರ ಜೀವನದಲ್ಲಿ ಬಳಕೆಯಲ್ಲಿದ್ದು ಇಂದು ಕಣ್ಮರೆ ಆಗಿರುವ ಅನೇಕ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಜಾನಪದ ಹಾಡು, ನೃತ್ಯ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕ ಸಮಿತಿ ಸಂಚಾಲಕಿ ನಿರ್ಮಲಾ, ಕ್ರೀಡಾ ಸಂಚಾಲಕಿ ರಾಖಿ ಪೂವಣ್ಣ, ಸತೀಶ್, ನಮಿತಾ, ಮುದ್ದಪ್ಪ, ಈರಾಜು, ಸ್ನೇಹಾ, ಪ್ರಿಯಾ, ಸಿಂಚನಾ ಇದ್ದರು.