ಜಿಲ್ಲೆ

ಜ್ಞಾನಾಭಿವೃದ್ಧಿಗೆ ಶ್ರಾವಣ ಜಾನಪದ ಸಹಕಾರಿ, ಶ್ರೀಬಸವೇಶ್ವರ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಉಪನ್ಯಾಸ ಮಾಲಿಕೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡದ ಸತ್ತೂರಿನ ಶ್ರೀ ಬಸವೇಶ್ವರ ಎಜುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಹಾಗೂ ಡಾ. ಶರಣಪ್ಪ ಎಂ. ಕೊಟಗಿ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರೂರಲ್ ಬಿ.ಇಡಿ ಕಾಲೇಜಿನಲ್ಲಿ ಶ್ರಾವಣ ಜಾನಪದ ಉಪನ್ಯಾಸ ಮಾಲಿಕೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಟ್ರಸ್ಟಿ ನಾಗರಾಜ ಕೊಟಗಿ, ಉಪನ್ಯಾಸ ಮಾಲಿಕೆಯ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಿದೆ. ಹಲವು ವಿಚಾರಗಳ ವಿನಿಮಯವಾಗುವ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ, ಗ್ರಾಮೀಣ ಹೆಣ್ಣು ಮಕ್ಕಳು ಜನಪದ ಗೀತೆಗಳ ಮೂಲಕ ನಿತ್ಯ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ನಮ್ಮ ವಸ್ತ್ರಾಭರಣಗಳು ನಮ್ಮ ಸಂಸ್ಕೃತಿ, ವ್ಯಕ್ತಿತ್ವವನ್ನು ತೋರಿಸುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಜನ ಮರೆಯುತ್ತಿರುವುದು ವಿಷಾದದ ಸಂಗತಿ ಎಂದರು.

ರೂರಲ್ ಬಿ. ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ ಮಾತನಾಡಿ, ಬೋಧನೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸಲು ಹಾಗೂ ಗಮನ ಕೇಂದ್ರೀಕರಿಸಲು ಜನಪದ ಗೀತೆಗಳು ಅವಶ್ಯಕ ಎಂದರು.

ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದರು.

ಶ್ರೇಯಾ ಸೇವಾ ಸಮಿತಿ ಅಧ್ಯಕ್ಷ ವಿ.ಜಿ. ಪಾಟೀಲ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ನವೀನ್ ಕರೆರ ಪಾಲ್ಗೊಂಡಿದ್ದರು.

ಸಂಗೀತಾ ಹಿರೇಮಠ ಪ್ರಾರ್ಥನೆ ಹಾಡಿದರು. ರೇಖಾ ಸಾಗರ್ ಮತ್ತು ರಿತಿಕಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಹನಾ ಮೆಣಸಿಗಿ ವಂದಿಸಿದರು.