ಜಿಲ್ಲೆ

ಡಿಸೆಂಬರ್ ನಲ್ಲಿ ಹುಬ್ಬಳ್ಳಿಯಲ್ಲಿ ಜಾನಪದ ಜಾತ್ರೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡದ ಇಬ್ರಾಹಿಮ್ ಸುತಾರ ಸಾಮರಸ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಕಲಾವಿದರಿಂದ ಜಾನಪದ ಜಾತ್ರೆಯನ್ನು ಬರುವ ಡಿಸೆಂಬರ್ ನಲ್ಲಿ ನಗರದ ಸಿದ್ಧಾರೂಢ ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಜಾನಪದ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜತೆಗೆ ಸಮಾಜದಲ್ಲಿ ಕಲೆ, ಸಂಸ್ಕೃತಿ ಮೂಲಕ ಸಾಮರಸ್ಯ ಮೂಡಿಸುವ ಆಶಯದೊಂದಿಗೆ ಜಾನಪಾದ ಜಾತ್ರೆ ಆಯೋಜಿಸಲಾಗುತ್ತಿದೆ. ಈಗಾಗಲೇ ಸಂಘಟನೆ ನಡೆಯುತ್ತಿದ್ದು, ಶೀಘ್ರ ಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಭಾಗದ ಕಲಾವಿದರು ಜಾತ್ರೆಯಲ್ಲಿ ಪಾಲ್ಗೊಳ್ಳುವರು. 350 ಕಲಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಮೂರು ದಿನಗಳ ಕಾಲ ಸಮಾರಂಭ ನಡೆಯಲಿದೆ. ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಕಲಾವಿದರಾದ ಸಿ.ಎಂ. ಚನ್ನಬಸಪ್ಪ, ಅಬ್ದುಲ್ ಸಾಬ, ಸಿದ್ದಪ್ಪ ನೆಲಗುಡ್ಡ, ಇಲಿಯಾಜ್ ಎಂ. ಇತರರು ಇದ್ದರು.