ವಿಪ ಸದಸ್ಯ ಎನ್.ರವಿಕುಮಾರ್ ಆಕ್ರೋಶ
ಉಡುಪಿ ಡಿಸಿ ಕಚೇರಿ ಬಳಿ ಬಿಜೆಪಿ ಜನಾಂದೋಲನ
ದಲಿತ ವಿರೋಧಿ ಧೋರಣೆ ಕಾಂಗ್ರೆಸಿನ ಪರಂಪರಾಗತ ಸಂಪ್ರದಾಯವಾಗಿದೆ. ಆ ಗುಣ ಎಂದೂ ಬದಲಾಗದು. ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ 2024-25ನೇ ಸಾಲಿನ ಬಜೆಟ್ನಲ್ಲಿ 39 ಸಾವಿರ ಕೋಟಿ ರೂ. ಮೀಸಲಿಟ್ಟ ಹೆಗ್ಗಳಿಕೆ ಇದೆ. ಆದರೆ, ಇನ್ನೂ 19 ಸಾವಿರ ಕೋಟಿ ರೂ. ಅನುದಾನ ಖರ್ಚೇ ಮಾಡಿಲ್ಲ. ಇದೀಗ ಖಜಾನೆ ಖಾಲಿಯಾಗಿದ್ದು, ದಲಿತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮಕ್ಮಲ್ ಟೋಪಿ ಹಾಕಿದೆ ಎಂದು ಬಿಜೆಪಿಯ ವಿಪ ಸದಸ್ಯ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ತನ್ನಿಮಿತ್ತ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಮೋಸ, ದಲಿತರ ಮೀಸಲು ನಿಧಿಗೆ ಕನ್ನ' ಎಂಬ ಜನಾಂದೋಲನದಲ್ಲಿ ಮಾತನಾಡಿದರು.
ರ್ಖಚಾಗಿದ್ದು ಶೇ.25-30 ಮಾತ್ರ
ದಲಿತರಿಗೆ ಮೀಸಲಿಟ್ಟ ಅನುದಾನ 11 ತಿಂಗಳಾದರೂ ರ್ಖಚಾಗಿಲ್ಲ. ಇನ್ನೊಂದು ತಿಂಗಳಲ್ಲಿ ಪೂರ್ಣ ಖರ್ಚು ಸಾಧ್ಯವೇ? ಅಂಬೇಡ್ಕರ್ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ, ಆದಿ ಜಾಂಬವ ಹೀಗೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ರ್ಖಚಾಗಿದ್ದು ಶೇ. 25-30ಮಾತ್ರ. ದಲಿತರ ಕಲ್ಯಾಣದ ಹೊರತು ಈ ದೇಶದ ಕಲ್ಯಾಣವಾಗದು ಎಂದರು.
ಮನವಿ ಸ್ವೀಕರಿಸಿದ ಡಿಸಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಬಿಜೆಪಿ ನಾಯಕರಿಂದ ಮನವಿ ಸ್ವೀಕರಿಸಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ, ದಿನಕರ ಬಾಬು, ಮಾಜಿ ಶಾಸಕ ಹರ್ಷವರ್ಧನ್ ನಂಜನಗೂಡು, ಕುಯಿಲಾಡಿ ಸುರೇಶ್ ನಾಯಕ್, ಕೆ. ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
ಹುಡುಗಾಟಿಕೆ ಆಡ್ಬ್ಯಾಡ್ರೀ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಉತ್ತರ ಕರ್ನಾಟಕ ಶೈಲಿಯಲ್ಲೇ ಮಾತನಾಡಿ ಹಾಸ್ಯ ಚಟಾಕಿ ಸಿಡಿಸಿದರು. ಸಿದ್ದರಾಮಯ್ಯ ನೀನ್ಯಾಕಯ್ಯಾ ಎಸ್ಸಿ ಎಸ್ಟಿ ಹಣ ಮುಟ್ಟಿದಿ? ಯಾಕ ತಗೀಬೇಕಿತ್ತದು? ಹುಡುಗಾಟಿಕೆ ಆಡ್ಬ್ಯಾಡ್ರೀ. ಯಾರೂ ಕೇಳೋರಿಲ್ಲಂತ ತಿಳಿದಿರಿ? ನಿಮ್ಮನ್ನೀಗ ದಲಿತ್ರೂ ನೋಡ್ತಿಲ್ಲ, ಖರ್ಗೆ, ಮಹದೇವಪ್ಪನೂ ಸುಮ್ನದಾರ. ಅಂಬೇಡ್ಕರ್, ಜಗಜೀವನ್ರಾಮ್ಗೆ ಕಾಂಗ್ರೆಸ್ನವು ಮಾಡಿದ ಅನ್ಯಾಯ ಎಲ್ರಿಗೂ ತಿಳಿದದ. ನಿಮ್ಮ ಬಜೆಟ್ನ್ಯಾಗೂ ದಲಿತರಿಗೆ ಅನ್ಯಾಯ ಮುಂದುವರಿದದ. ಉತ್ತರ, ದಕ್ಷಿಣದ ದಲಿತ್ರನೆಲ್ಲ ಸೇರ್ಸಿ ನಾವ್ ಹೋರಾಟ ಮಾಡಿ ತಕ್ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿದರು.
ಅನುದಾನ ಬಳಕೆ ಶಾಸನಬದ್ಧ ಜವಾಬ್ದಾರಿ. ಮಾ. 7ರಂದು ಮಂಡಿಸುವ ರಾಜ್ಯ ಬಜೆಟ್ನಲ್ಲಿ ಎಸ್ಸಿಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿದರೆ ಸದನದ ಒಳ&ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ. ವಸತಿ ಶಾಲೆಗಳ ಸ್ಥಿತಿ ಹದಗೆಟ್ಟಿದೆ. ಭೂ ಒಡೆತನದ ಕನಸು, ನಡೆವ ದಾರಿ, ಕುಡಿಯುವ ನೀರು, ಆರೋಗ್ಯಕ್ಕೆ ಮೀಸಲಿಟ್ಟ ಹಣ ಖರ್ಚು ಮಾಡಬೇಕು. ಅನ್ಯ ಉದ್ದೇಶಕ್ಕೆ ಬಳಸುವುದು ಅಕ್ಷಮ್ಯ.
| ಕೋಟ ಶ್ರೀನಿವಾಸ್ ಪೂಜಾರಿ. ಉಡುಪಿ ಸಂಸದ