ಜಿಲ್ಲೆ

ಕಾಂಗ್ರೆಸ್ ಕಚೇರಿಯಲ್ಲಿ ಜಾನಕಿ ವಲ್ಲಭನ ಸ್ಮರಣೆ

Shivamogga - Desk - Vinayakumar D B

ಸಾಗರ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಧನ್ಯತೆಯ ಕ್ಷಣಗಳಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶ ಸಾಕ್ಷಿಯಾಯಿತು. ಭಕ್ತರು ಶ್ರೀರಾಮನ ಬೃಹತ್ ್ಲೆಕ್ಸ್‌ಗಳನ್ನು ಅಳವಡಿಸಿದ್ದರು.ಪ್ರಮುಖ ರಸ್ತೆ, ಬೀದಿಗಳು ಕೇಸರಿ ಬಂಟಿಂಗ್ಸ್, ತೋರಣಗಳಿಂದ ನಳನಳಿಸಿದವು. ಎಲ್ಲೆಡೆ ಶ್ರೀರಾಮನ ಜಯಘೋಷ ಮೊಳಗಿತು.

ನಗರದ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಪ್ರಮುಖರು ಶ್ರೀರಾಮನ ಬೃಹತ್ ಭಾವಚಿತ್ರ ಹಾಗೂ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಗಾಂಧೀಜಿ ರಾಮನ ಪರಮಭಕ್ತರಾಗಿದ್ದು ರಾಮರಾಜ್ಯ ಸ್ಥಾಪನೆ ಕನಸು ಕಂಡಿದ್ದರು. ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ರಾಮಭಜನೆಯನ್ನು ಸಾಮೂಹಿಕವಾಗಿ ನಡೆಸುತ್ತಿದ್ದರು. ಗುಂಡೇಟು ಬಿದ್ದ ಕೊನೆಕ್ಷಣದಲ್ಲೂ ಅವರು ಹೇ ರಾಮ್ ಎಂದೇ ಪ್ರಾಣ ಬಿಟ್ಟರು. ನಾವು ಏನೇ ತೊಂದರೆಯಾದರೂ ಮೊದಲು ಅಮ್ಮ ಎಂದು ಉಚ್ಛರಿಸುತ್ತೇವೆ. ಆದರೆ ಗಾಂಧೀಜಿ ಅವರು ಪ್ರಾಣ ಬಿಡುವಾಗಲೂ ರಾಮ ನಾಮ ಜಪಿಸಿದರು ಎಂದರೆ ಅವರಿಗೆ ರಾಮನ ಮೇಲಿದ್ದ ಭಕ್ತಿ ಎಂತಹದ್ದು ಎಂಬುದು ತಿಳಿಯುತ್ತದೆ. ಭಕ್ತಿ ಮೂಲಕ ದೇವರನ್ನು ಕಾಣಬೇಕು ಎಂಬುದು ಗಾಂಧೀಜಿ ಪ್ರಮುಖ ಆಶಯವಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ಕಚೇರಿ ಮುಂಭಾಗ ಪಾನಕ, ಕೋಸಂಬರಿ ವಿತರಿಸಲಾಯಿತು. ಕಚೇರಿ ಆವರಣದಲ್ಲಿ ರಾಮ ಭಜನೆ ಆಯೋಜಿಸಲಾಗಿತ್ತು
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಐ.ಎನ್.ಸುರೇಶಬಾಬು, ಚೇತನರಾಜ್ ಕಣ್ಣೂರು, ಜ್ಯೋತಿ ಕೋವಿ, ಅನಿತಾ, ಮಹಾಬಲ ಕೌತಿ, ಸೋಮಶೇಖರ ಲ್ಯಾವಿಗೆರೆ, ಮಧುಮಾಲತಿ, ಪರಿಮಳಾ, ಗಣಪತಿ ಮಂಡಗಳಲೆ, ಉಮೇಶ್, ಆನಂದ ಭೀಮನೇರಿ, ಮೈಕೆಲ್ ಡಿಸೋಜ, ಡಿ.ದಿನೇಶ್, ಅಶೋಕ ಬೇಳೂರು, ಚಿನ್ಮಯ್, ನಾಗರತ್ನಾ ಇತರರಿದ್ದರು.