ಜಿಲ್ಲೆ

ಕೃಷಿ ಮೇಳದಲ್ಲಿ ಜನವೋ ಜನ: ಸ್ವಸಹಾಯ ಸಂಘಗಳ ಉತ್ಪನ್ನಕ್ಕೆ ಬೇಡಿಕೆ

ಬೆಂಗಳೂರು: ಕೃಷಿ ಮೇಳದ ಎರಡನೇ ದಿನವಾದ ಶುಕ್ರವಾರ ರೈತರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವ್ಯವಸಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನ ಹಾಗೂ ವಿವಿಧ ಬೆಳೆಗಳು, ಪುಷ್ಪಗಳ ಕುರಿತು ಮಾಹಿತಿ ಪಡೆದು ಪುಳಕಿತರಾದರು.

ಕೃಷಿ ವಿವಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಪ್ರದರ್ಶಿಸಿದ್ದ ಮಳಿಗೆಗಳು ಜನರಿಂದ ತುಂಬಿದ್ದವು. ಅಲ್ಲಿ ವಿವಿಧ ವಿಷಯಗಳ ಬಗ್ಗೆ ಪ್ರದರ್ಶಿಸಿದ್ದ ತಂತ್ರಜ್ಞಾನ ಹಾಗೂ ಕೃಷಿಗೆ ಪೂರಕವಾದ ಉತ್ಪನ್ನ, ಉಪಕರಣಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಶಾಲಾ ಮಕ್ಕಳು ಮಳಿಗೆಗಳ ಪ್ರತಿನಿಧಿಗಳಿಂದ ಮಾಹಿಸಿ ಸಂಗ್ರಹಿಸಿ ನೋಟ್‌ ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದರು. ತಾಕುಗಳಲ್ಲಿ ಹೊಸ ತಳಿಗಳ ಬಗ್ಗೆ ವಿಜ್ಞಾನಿಗಳು ರೈತರಿಗೆ ಮಾಹಿತಿ ಒದಗಿಸಿದರು. ಮಣ್ಣು ರಹಿತ ಕೃಷಿ, ಕಡಿಮೆ ನೀರು ಬಳಸಿ ಹೆಚ್ಚು ಆದಾಯ ಪಡೆಯುವ ವಿಧಾನ ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ವಿವಿಯ ಸಂಶೋಧನಾ ವಿದ್ಯಾರ್ಥಿಗಳು ನಾಗರಿಕರ ಸಂದೇಹಗಳಿಗೆ ಸ್ಪಂದಿಸಿದರು.

ಎರಡನೇ ದಿನವೂ ಕೂಡ ರಿಯಾಯಿತಿ ದರದಲ್ಲಿ ಒದಗಿಸಿದ ಭೋಜನವನ್ನು 13 ಸಾವಿರ ಮಂದಿ ಸವಿದಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ (ರೈತರು ಸೇರಿ) ಮೇಳ ವೀಕ್ಷಣೆಗೆ ಆಗಮಿಸಿದ್ದರು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಳೆ ಉತ್ಪನ್ನ ತಯಾರಿಕೆಗೆ ಮನ್ ಕಿ ಬಾತ್ ಪ್ರೇರಣೆ:

ಪ್ರತೀ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮ ಜನಪ್ರಿಯವಾಗಿದೆ. ದೇಶದ ವಿವಿಧೆಡೆ ಜನಸಾಮಾನ್ಯ ಸಾಧನೆ ಮಾಡಿರುವ ವಿಷಯಗಳ ಕುರಿತು ಪ್ರಧಾನಿ ರೇಡಿಯೋ ಸಂವಾದಲ್ಲಿ ತಿಳಿಸುವುದು ಹಲವರಿಗೆ ಪ್ರೇರಣೆಯಾಗುತ್ತಿದೆ. ಇದೇ ರೀತಿ ಚಾಮರಾಜನಗರದ ಉಮ್ಮತ್ತೂರು ಗ್ರಾಮದ ಗೃಹಿಣಿ ವರ್ಷಾ ಅವರು ಮನ್ ಕಿ ಬಾತ್‌ನಲ್ಲಿ ಬಾಳೆ ಉತ್ಪನ್ನಗಳ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಅದನ್ನೇ ಪ್ರೇರಣೆಯಾಗಿಸಿಕೊಂಡು ತಮಿಳುನಾಡು ವ್ಯಕ್ತಿಯೊಬ್ಬರ ಮೂಲಕ ಬಾಳೆ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ.

ಬಿಇ, ಎಂ.ಟೆಕ್ ಪದವೀಧರೆ ಆಗಿರುವ ಈಕೆ ಮದುವೆ ಬಳಿಕ ಸಣ್ಣ ಉದ್ದಿಮೆ ಸ್ಥಾಪಿಸಿ ತನ್ನ ತವರು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬಾಳೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಆದಾಯ ಗಳಿಸಿ ಸ್ವಾವಲಂಬನೆಯ ಹಾದಿ ಹಿಡಿದಿದ್ದಾರೆ. ಪರ್ಸ್, ಚೀಲ, ಹೂದಾನಿ, ಅಲಂಕಾರಿಕ ಸಾಮಗ್ರಿಗಳು ಸೇರಿ 18 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಜತೆಗೆ ಹಲವು ಮಂದಿ ಉದ್ಯೋಗವನ್ನೂ ನೀಡಿದ್ದಾರೆ. ವರ್ಷಾ ಅವರ ಉದ್ದಿಮೆಯಲ್ಲಿ ತಯಾರಿಸಿರುವ ವಸ್ತುಗಳು ಮೇಳದಲ್ಲಿ ಜನರ ಗಮನ ಸೆಳೆದಿದೆ.

ವೀಕ್ಷಣೆಗೆ ಮಳೆ ಅಡ್ಡಿ:

ಕೃಷಿ ಮೇಳ ಆರಂಭವಾದಾಗಿನಿಂದಲೂ ಆಗಾಗ್ಗೆ ಮಳೆ ಬರುತ್ತಲೇ ಇದೆ. ಮೊದಲ ದಿನ ಮಳೆಯಿಂದ ವೀಕ್ಷಣೆಗೆ ತುಸು ಅಡ್ಡಿಯಾಗಿತ್ತು. ಜತೆಗೆ ಜನರು ಕೂಡ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಆಗಮಿಸಿದ್ದರು. ಮಧ್ಯಾಹ್ನದ ಬಳಿಕ ಮೋಡ ವಾತಾವರಣ ಕಂಡುಬಂದಿತ್ತಾದರೂ, ಸಂಜೆ ಜೋರಾಗಿ ಮಳೆ ಸುರಿಯಿತು. ಇದರಿಂದ ನಾಗರಿಕರು ವರ್ಷಧಾರೆಯಲ್ಲೇ ನೆನೆದುಕೊಂಡು ಮನೆ ತಲುಪಬೇಕಾಯಿತು. ಮೇಳದ ಬಳಿಯ ಪಾರ್ಕಿಂಗ್ ಜಾಗ ಹಾಗೂ ತಾಕುಗಳ ಬಳಿ ಕೆಸರು ಇದ್ದ ಕಾರಣ ಜನ ಅತ್ತ ತೆರಳಲು ಹಿಂಜರಿದರು.