ವಿಜಯಪುರ: ಆರೋಗ್ಯ ಪೂರ್ಣ ಸಮಾಜಕ್ಕೆ ಸಂವಿಧಾನವೇ ಭದ್ರ ಬುನಾದಿ. ಅದು ಬುದ್ದನ ಗ್ರಂಥ, ಬಸವಣ್ಣನ ಆತ್ಮ, ಕನಕರ ಆಶಯ, ನಮ್ಮ ಸಂಸ್ಕತಿಯ ಬೇರೆ ಬೇರೆ ಪರಪಂಪರೆಯ ಪ್ರತೀಕ. ಇಂಥ ದೇಶದಲ್ಲಿ ಸಮಾನತೆ, ಸೌಹಾರ್ದತೆ, ಶಾಂತಿ ಮತ್ತು ಸಮನ್ವಯತೆ ಬೇಕು ಎಂದು ಕೇಳಿದ್ದು ತಪ್ಪಾ? ‘ದ್ವೇಷ ಬಿಟ್ಟು ದೇಶ ಕಟ್ಟು ಎಂದರೆ ತಪ್ಪೆ? ಎಂದು ಮೈಸೂರಿನ ಜನಪರ ಖ್ಯಾತ ಗಾಯಕ ಜನಾರ್ಧನ (ಜೆನ್ನಿ) ಪ್ರಶ್ನಿಸಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾ ಬಳಗ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜನಕಲಾ ಸಾಂಸ್ಕೃತಿಕ ಮೇಳ’ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ದೇಶದ ಸಂವಿಧಾನ ಸಮಗ್ರವನ್ನೂ ಒಳಗೊಂಡಿದೆ. ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಹೀಗಾಗಿ ಎಲ್ಲಿ ಸಮಾನತೆ ಬಂದರೆ ತಮ್ಮ ಹಿಡಿತ ಹೋಗಲಿದೆ ಎಂಬ ಭಯ ಕೆಲವರನ್ನು ಕಾಡುತ್ತಿದೆ. ಎಚ್ಚರಿಕೆಯಿಂದಿರಿ-ಎಚ್ಚರ ತಪ್ಪಿದರೆ ಬೆತ್ತಗಳು ರೆಡಿಯಾಗಿರುತ್ತವೆ. ದಿನದಿಂದ ದಿನಕ್ಕೆ ಸಂಘಟನೆ ಭದ್ರವಾಗಬೇಕು. ನಿಸ್ವಾರ್ಥತೆ ಬೆಳೆಸಿಕೊಳ್ಳದಿದ್ದರೆ ಸ್ವಾರ್ಥಿಗಳು ಗೆಲ್ಲುತ್ತಾರೆ. ಸಿದ್ದಾಂತಗಳು, ವಿಚಾರಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಸಾಂಸ್ಕೃತಿಕವಾಗಿ ಅತ್ಯಂತ ಪ್ರಬಲವಾದ ಆಶಯ ಮತ್ತು ಆಶ್ರಯಗಳೇ ನಮ್ಮನ್ನು ಒಗ್ಗಟ್ಟಿನಿಂದ ಇರಿಸಲು ಸಾಧ್ಯ ಎಂದರು.
ದಲಿತರು ದಯನೀಯ ಸ್ಥಿತಿಗೆ ತಲುಪಿದಾಗ ಹುಟ್ಟಿದ ಚಳುವಳಿಯೇ ದಲಿತ ಚಳುವಳಿ ಮತ್ತು ದಲಿತ ಸಾಹಿತ್ಯ. ನಮ್ಮ್ಮ ಜನಕ್ಕೆ ಅರಿವು ಮೂಡಿಸುವುದು, ಸಾಮಾಜಿಕವಾಗಿ ಸಮಾನತೆ ಮೂಡಿಸುವುದು ಚಳವಳಿಯ ಆಶಯವಾಗಿತ್ತು. ಅಂಥ ಆಶಯಕ್ಕೆ ಮತ್ತೆ ವೇಗ ಸಿಗಲಿ ಎಂದರು.
ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಕರ್ನಾಕಟದಲ್ಲಿ ಜನಪರ ಚಳುವಳಿ ನಿಂತಿಲ್ಲ. ಆದರೆ ನಿಲ್ಲಿಸಲು ಶ್ರಮಿಸಲಾಗುತ್ತಿದೆ. ರೈತ ಚಳುವಳಿ, ಪೌರ ಕಾರ್ಮಿಕ ಚಳುವಳಿ, ದಲಿತ ಚಳುವಳಿಗೆ ತನ್ನದೇ ಆದ ನಿಲುವು ಇದ್ದರೂ ಅವುಗಳೆಲ್ಲದರ ಆಶಯ ಒಂದೇ ಎಂಬುದನ್ನು ಮೇ ಸಾಹಿತ್ಯ ಸಮ್ಮೇಳನ ತೋರಿಸಿಕೊಟ್ಟಿದೆ. ಈ ಮೇಳಗಳ ಆಶಯಗಳು ಬರಹ, ಭಾಷಣ ಮತ್ತು ಹಾಡಿನ ಮೂಲಕ ಜನರನ್ನು ಮುಟ್ಟಬೇಕಿದೆ. ಬಂಡಾಯವೇ ಭಕ್ತನ ಮೊದಲ ನಿಲುವು ಎಂಬ ಬಸವಣ್ಣನ ಆಶಯವನ್ನು ಜನರಿಗೆ ತಲುಪಿಸಬೇಕಿದೆ ಎಂದರು.
ಜನಪದ ಕಲಾವಿದರಾದ ಬಸಮ್ಮ ಪೀರಪ್ಪ ನಡುವಿನಮನಿ, ರಮಾಬಾಯಿ ಬೆಳ್ಳೆನ್ನವರ, ಆದಮ್ಮ ಚಂದಪ್ಪ ಕದ್ರಿ,ಸಾವಿತ್ರಿಬಾಯಿ ನಿಡೋಣಿ, ಪದ್ಮಾವತಿ ಸಂಗಪ್ಪ ವಾಗ್ಮೋರೆ ಡಾ.ಅಂಬೇಡ್ಕರ್ ಗಾಯನದ ಮೂಲಕ ಸಮ್ಮೇಳನ ಉದ್ಘಾಟಿಸಿದರು. ದಾವಣಗೆರೆಯ ಬಿ.ಶ್ರೀನಿವಾಸ ಆಶಯ ನುಡಿಗಳನ್ನಾಡಿದರು. ಹಿರಿಯ ಪತ್ರಕರ್ತ ಅನಿಲ ಹೊಸಮನಿ ಸ್ವಾಗತಿಸಿದರು.
ಮುಖಂಡರಾದ ತುಕಾರಾಂ ಚಂಚಲಕರ, ಡಾ.ಭೀಮಪ್ಪ ಎ, ದ್ರಾಕ್ಷಾಯಣಿ ಹುಡೇದ, ಪರಶುರಾಮ ಲಂಬು, ಪ್ರಭುಗೌಡ ಪಾಟೀಲ, ನಾಗರಾಜ ಲಂಬು, ಚೆನ್ನು ಕಟ್ಟಿಮನಿ, ಬಸವರಾಜ ಸೂಳೆಬಾವಿ ಹೀಗೆ ಅನೇಕರು ಪಾಲ್ಗೊಂಡಿದ್ದರು. ಹಿರಿಯ ಪತ್ರಕರ್ತ ಅನೀಲ ಹೊಸಮನಿ ಸ್ವಾಗತಿಸಿದರು.
ಹೋರಾಟದ ಹಾಡುಗಳು, ಕ್ರಾಂತಿಗೀತೆಗಳು, ಜನಪದ ಕಲಾ ಪ್ರದರ್ಶನ ಗಮನ ಸೆಳೆಯಿತು. ಹಂತಕರ ಗುಂಡಿಗೆ ಬಲಿಯಾದ ಡಾ. ಎಂ.ಎಂ. ಕಲಬುರ್ಗಿಯವರ ಜೀವನಾಧಾರಿತ ನಾಟಕ ಪ್ರದರ್ಶನಗೊಂಡಿತು.