ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಗರಿಕರ ಸಮಸ್ಯೆ, ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅಧ್ಯಕ್ಷತೆಯಲ್ಲಿ ಅ. 21ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಮಟ್ಟದ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಜನರು ತಮ್ಮ ಕುಂದಕೊರತೆ, ಅಹವಾಲು ಸಲ್ಲಿಸಬಹುದು. ಈಗಾಗಲೇ ನಡೆದ ಜನ ಸಂಪರ್ಕ ಕಾರ್ಯಕ್ರಮಗಳಲ್ಲಿ ಸ್ವೀಕೃತವಾದ ಬಹುತೇಕ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ. ಇಲಾಖೆಗಳ ಹಾಗೂ ಸರ್ಕಾರದ ಹಂತದಲ್ಲಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಹಿಂದೆ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಐಪಿಜಿಆರ್ಎಸ್ ತಂತ್ರಾಂಶದಲ್ಲಿ ವಿಲೇವಾರಿ ಕ್ರಮ ಜರುಗಿಸಿದ ಮಾಹಿತಿಯೊಂದಿಗೆ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಲು ಸೂಚಿಸಿದ್ದಾರೆ.