ಜಿಲ್ಲೆ

28ರಂದು ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭ`ಟನೆ

madikerimailmanju

ಚಿಕ್ಕಮಗಳೂರು: ಬೆಳೆಗಾರರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿ ಆಲ್ದೂರು ಕಾಫಿ ಬೆಳೆಗಾರರ ಸಂಘ ಜ.28 ರಂದು ನಗರದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ಸಿ.ಸುರೇಶ್ ತಿಳಿಸಿದರು.

ಆಲ್ದೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಸಹಸ್ರಾರು ರೈತರು ವಾಹನಗಳಲ್ಲಿ ನಗರಕ್ಕೆ ಆಗಮಿಸಿ ಐಜಿ ರಸ್ತೆ, ಎಂಜಿ ರಸ್ತೆ ಮೂಲಕ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಕಷ್ಟದಲ್ಲಿ ಉದ್ಯಮ: 

8 ವರ್ಷಗಳಿಂದ ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಉತ್ತಮ ಧಾರಣೆ ಇಲ್ಲದೆ ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರೂ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ನಷ್ಟಕ್ಕೆ ಒಳಗಾದ ಎಲ್ಲ ಬೆಳೆಗಾರರಿಗೆ ಅತಿವೃಷ್ಟಿ ಪರಿಹಾರ ತಲುಪಿಲ್ಲ. ಫಸಲ್ ಬಿಮಾ ಯೋಜನೆ ಪ್ರಚಾರಕ್ಕೆ ಸೀಮಿತವಾಗಿದೆ. ಹಲವು ಸಂಕಷ್ಟದಿಂದ ಬೆಳೆಗಾರರು ಪಡೆದ ಬ್ಯಾಂಕ್ ಸಾಲಗಳು ಎನ್‍ಪಿಎ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಳೆಗಾರರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಅಧಿಕಾರ ಇಲ್ಲ: 

ಕೇಂದ್ರ ಸರ್ಕಾರ ಕಾಫಿ ಮಂಡಳಿಯ ಜಿಲ್ಲಾ ಕಚೇರಿಯಲ್ಲಿ ವಿಸ್ತರಣಾ ಕಚೇರಿಗಳನ್ನು ವಿಲೀನಗೊಳಿಸುವ ನೆಪದಲ್ಲಿ ಮುಚ್ಚಲು ಮುಂದಾಗಿದೆ. ಮಂಡಳಿ ಹಾಗೂ ಸರ್ಕಾರದ ಸೌಲಭ್ಯ, ಸಲಹೆ ಪಡೆಯಲು ವಿಸ್ತರಣಾ ಕಚೇರಿಗಳನ್ನು ಉಳಿಸಿಕೊಳ್ಳಬೇಕಿದೆ. ಕಾಫಿ ಬೆಳೆಗಾರರ ಪೂಲ್ ಫಂಡ್ ಹಣದಿಂದಲೇ ಮಂಡಳಿ ಅನೇಕ ಆಸ್ತಿಗಳನ್ನು ಖರೀದಿಸಿದೆ. ದೇಶದ ಸಾರ್ವಜನಿಕ ವಲಯದ ಕಚೇರಿಗಳನ್ನು ಮುಚ್ಚುವ ಅಥವಾ ಮಾರುವ ಅಧಿಕಾರ ಸರ್ಕಾರಕ್ಕಿಲ್ಲ ಎಂದರು.

ಕೆಜಿಎಫ್ ಮಾಜಿ ಉಪಾಧ್ಯಕ್ಷ ಡಿ.ಎಂ.ವಿಜಯ್, ಕೆಜಿಎಫ್ ನಿರ್ದೇಶಕ ಕೆ.ಬಿ.ಅಶೋಕ್, ಆಲ್ದೂರು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಎಚ್.ಈ.ಲವ ಸುದ್ದಿಗೋಷ್ಠಿಯಲ್ಲಿದ್ದರು.