???????????????????????????????????? 
ಜಿಲ್ಲೆ

ಜ.26: ನಾಗರಿಕ ಹಕ್ಕು ಹೋರಾಟ ಸಮಿತಿ ಪ್ರತಿಭಟನೆ

madikerimailmanju

ಚಿಕ್ಕಮಗಳೂರು: ನಗರದ ದೂರದರ್ಶನ ಮರುಪ್ರಸಾರ ಕೇಂದ್ರವನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು ಇದನ್ನು ಖಂಡಿಸಿ ಜ.26ರಂದು ನಾಗರಿಕ ಹಕ್ಕು ಹೋರಾಟ ಸಮಿತಿ ಪ್ರತಿಭಟನೆ ನಡೆಸಲಿದೆ ಸಮಿತಿ ಸಂಚಾಲಕ ಎಸ್.ವಿಜಯಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದರ್ಶನ ಮರುಪ್ರಸಾರ ಕೇಂದ್ರವನ್ನು ಕೇರಳಕ್ಕೆ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ. ನಗರದಲ್ಲಿ 1985ರಲ್ಲಿ ದೂರದರ್ಶನ ಮರುಪ್ರಸಾರ ಕೇಂದ್ರ ಸ್ಥಾಪಿಸಲಾಗಿತ್ತು. ಇದರಿಂದ ಚಿಕ್ಕಮಗಳೂರು ಸುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿ ದೂರದರ್ಶನ - ಚಂದನ ವಾಹಿನಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಮನರಂಜನೆ ಜತೆಗೆ ಕೃಷಿ, ವಿಜ್ಞಾನ, ಶಿಕ್ಷಣ, ಉದ್ಯೋಗ ಮತ್ತಿತರ ಉಪಯುಕ್ತ ವಿಚಾರಗಳು, ಮಾಹಿತಿ ಪ್ರಸಾರ ಮಾಡಲಾಗುತ್ತಿತ್ತು. ಹೀಗಿರುವಾಗ ಅದನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದರು.

ದೂರದರ್ಶನದಲ್ಲಿ ಪಾಠ: 
ಕರೊನಾ ವೇಳೆ ಸಾವಿರಾರು ವಿದ್ಯಾರ್ಥಿಗಳು ದೂರದರ್ಶನದ ಮೂಲಕ ಬಿತ್ತರವಾಗುತ್ತಿದ್ದ ಆನ್‍ಲೈನ್ ಪಾಠ ಕೇಳುತ್ತಿದ್ದರು. ಈಗಲೂ ದೂರದರ್ಶನಕ್ಕೆ ಸಾಕಷ್ಟು ವೀಕ್ಷಕರಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ಕಟ್ಟಡದಲ್ಲಿರುವ ಮರುಪ್ರಸಾರ ಕೇಂದ್ರಕ್ಕೆ ಹೆಚ್ಚಿನ ಬಾಡಿಗೆ ಕೇಳಲಾಗುತ್ತಿದೆ ಎಂದು ಅದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಸ್ಥಳೀಯ ಶಾಸಕರು, ಸಂಸದರು ಈ ಬಗ್ಗೆ ಗಮನಹರಿಸಿ ಈ ಕೇಂದ್ರವನ್ನು ಉಳಿಸಿಕೊಳ್ಳುವ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ: 
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ದೂರದರ್ಶನ ಕೇಂದ್ರ ಸ್ಥಗಿತ ಖಂಡಿಸಿ ಮಂಗಳವಾರ ಬೆಳಗ್ಗೆ 8.30 ರಿಂದ 11 ಗಂಟೆವರೆಗೆ ಆಜಾದ್ ಪಾರ್ಕ್ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಮರುಪ್ರಸಾರ ಕೇಂದ್ರ ಸ್ಥಗಿತಗೊಳಿಸುವುದನ್ನು ಖಂಡಿಸಿ ಸಂಸದರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೋಸಸ್, ನವಶಕ್ತಿ ಕರ್ನಾಟಕ ಸಂಘಟನೆ ಅಧ್ಯಕ್ಷ ರಘು, ಕಾಂಗ್ರೆಸ್ ಮುಖಂಡ ಕಾರ್ತಿಕ್ ಚೆಟ್ಟಿಯಾರ್, ಜೆಡಿಎಸ್‍ನ ಲಕ್ಷ್ಮಣ್ ಹುಣಸೇಮಕ್ಕಿ ಸುದ್ದಿಗೋಷ್ಠಿಯಲ್ಲಿದ್ದರು.