JAMPENAHHALI LAKE 
ಜಿಲ್ಲೆ

ಕೋಡಿ ಹರಿದ ಜಂಪೇನಹಳ್ಳಿ ಕೆರೆ

ತುಮಕೂರು ಡೆಸ್ಕ್

ಕೊರಟಗೆರೆ: ಬುಧವಾರ ಮತ್ತು ಮಂಗಳವಾರ ಸುರಿದ ಮಳೆಗೆ ಕೊರಟಗೆರೆ ಪಟ್ಟಣದ ಜಂಪೇನಹಳ್ಳಿ ಕೆರೆ ಕೋಡಿ ಹರಿಯುತ್ತಿದ್ದು, ಸುವರ್ಣಮುಖಿ ಮತ್ತು ಜಯ ಮಂಗಲಿ ನದಿಗಳಲ್ಲಿ ನೀರು ಹರಿಯುತ್ತಿದೆ. ಕಳೆದ ಒಂದು ವರ್ಷದಿಂದ ಸಂಪೂರ್ಣ ಒಣಗಿದ್ದ ಹಳ್ಳ ಮತ್ತು ಕೆರೆಗಳಲ್ಲಿ ನೀರು ಬಂದಿದ್ದು, ಮುಂಗಾರು ಮಳೆಯ ಆಗಮನದಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಪಟ್ಟಣದ ಕುಡಿಯುವ ನೀರಿನ ಆಧಾರ ಸ್ತಂಭವಾಗಿರುವ ಜಂಪೇನಹಳ್ಳಿ ಕೆರೆ ತುಂಬಿರುವುದಕ್ಕೆ ಪಟ್ಟಣವಾಸಿಗಳು ಹರ್ಷಗೊಂಡಿದ್ದಾರೆ. ಪಟ್ಟಣದಲ್ಲಿ ನಿರಂತರವಾಗಿ ಬರುತ್ತಿರುವ ಮಳೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನಿರ್ಮಾಣ ಮಾಡಿರುವಂತಹ ಬಡಾವಣೆಗಳಲ್ಲಿ ಕೆರೆಯಂತೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗಕ್ಕೆ ಆಹ್ವಾನಿಸುತ್ತಿದೆ. ಪಟ್ಟಣದ ವಿನಾಯಕ ನಗರ, ತಾಲೂಕು ಕಚೇರಿಯ ಹಿಂಭಾಗ, ಕಾಳಿದಾಸ ಬಡಾವಣೆ, ವಡ್ಡಗೆರೆ ರಸ್ತೆಯಲ್ಲಿರುವ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತುಕೊಂಡಿದೆ. ಗುರುವಾರ ರಾತ್ರಿ ಬಿದ್ದಂತಹ ಮಳೆಗೆ ಕೊರಟಗೆರೆ ಪಟ್ಟಣದ ಸುಣ್ಣಕಲ್ಲರ ಬೀದಿಯಲ್ಲಿನ ಮನೆಯ ಗೋಡೆ ಬಿದ್ದಿದ್ದು, ಅದೃಷ್ಟವಶಾತ್​ ಯಾವುದೇ ಸಾವು ನೋವು ಅಥವಾ ತೊಂದರೆ ಆಗಿಲ್ಲ.

ಕಾಲೇಜು ಆವರಣದಲ್ಲಿನ ನೀಲಗಿರಿ ಮರ ನೆಲಕ್ಕೆ
ಕಳೆದ 15 ದಿನಗಳ ಹಿಂದೆ ಸುರಿದ ಬಿರುಗಾಳಿ ಮಳೆಗೆ ತಾಲೂಕು ಕಚೇರಿ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಬೃಹದಾಕಾರದ ನೀಲಗಿರಿ ಮರ ನೆಲಕ್ಕೆ ಬಿದ್ದಿದೆ. ಈ ಮರ ಬಿದ್ದು 15 ದಿನಗಳು ಕಳೆದರೂ ಸಹ ಶಿಣ ಇಲಾಖೆಯಾಗಲಿ, ಪಟ್ಟಣ ಪಂಚಾಯಿತಿ ಅಥವಾ ಅರಣ್ಯ ಇಲಾಖೆ ಅಧಿಕಾರಿ ತೆರವಿಗೆ ಮುಂದಾಗದೆ ಮಕ್ಕಳ ಓಡಾಟಕ್ಕೆ ಸಮಸ್ಯೆಯಾಗಿದೆ.