ಜಮಖಂಡಿ ನಗರದ ಸಾಕ್ಷಾತ್ಕಾರ ನಿವಾಸದಲ್ಲಿ ಜಮಖಂಡಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ನಾಡೋಜ ಜಗದೀಶ ಗುಡಗುಂಟಿ, ಡಾ. ಉಮೇಶ ಮಹಾಬಳಶೆಟ್ಟಿ, ಎನ್.ಎಸ್. ದೇವರವರ, ಸಂತೋಷ ತಳಕೇರಿ, ಡಾ.ಟಿ.ಪಿ. ಗಿರಡ್ಡಿ ಇತರರು ಬಿಡುಗಡೆಗೊಳಿಸಿದರು. 
ಜಿಲ್ಲೆ

13 ರಂದು ಜಮಖಂಡಿ ತಾಲೂಕು ಸಾಹಿತ್ಯ ಸಮ್ಮೇಳನ

ಜಮಖಂಡಿ: ನಗರದ ಬಸವ ಭವನದಲ್ಲಿ ಅ.13 ರಂದು ಜಮಖಂಡಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಸಾಕ್ಷಾತ್ಕಾರ ನಿವಾಸದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ರುದ್ರಾವಧೂತ ಮಠದ ಸಹಜಾನಂದ ಶ್ರೀಗಳನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿ ರಚಿಸಲಾಗಿದೆ ಎಂದರು.

ಕಸಾಪ ಕೋಶಾಧ್ಯಕ್ಷ ಡಾ. ಉಮೇಶ ಮಹಾಬಳಶೆಟ್ಟಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮ್ಮೇಳನ ಮುಂದೂಡಲಾಗಿತ್ತು ಎಂದು ತಿಳಿಸಿದರಲ್ಲದೆ, ಅರ್ಥಪೂರ್ಣವಾಗಿ ಸಮ್ಮೇಳನ ಆಚರಣೆ, ಸ್ಮರಣ ಸಂಚಿಕೆ ಬಿಡುಗಡೆಗೆ ವಾರದಲ್ಲೇ ಎಲ್ಲ ಸಿದ್ಧತೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಲಹಾ ಸಮಿತಿ ಸದಸ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಅ.13 ರಂದು ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಗುವುದು. ಹಳೇ ತಹಸೀಲ್ದಾರ್ ಕಚೇರಿ ಆವರಣದಿಂದ ಬಸವ ಭವನವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 10 ಗಂಟೆಗೆ ಅಥಣಿ,ಮೋಟಗಿ ಮಠದ ಪ್ರಭು ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಹಿಳೆ, ದಲಿತ, ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. ಸಾಧಕರಿಗೆ ಸನ್ಮಾನ, ನಿರ್ಣಯ, ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳನ್ನು ತೆರೆಯಲಾಗುವುದೆಂದು ತಿಳಿಸಿದರು.

ಇದೇ ವೇಳೆ ಸಮ್ಮೇಳನದ ಲಾಂಚನ, ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ, ಕಸಾಪ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ, ವಿನೋದ ಲೋಣಿ ಇತರರಿದ್ದರು.