ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಜೇನುಕೃಷಿಗೆ ಪೂರಕ ವಾತಾವರಣವಿದೆ. ತಾಲೂಕಿನ ‘ಜಾಂಬೋಟಿ ಜೇನು’ ಪ್ರಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ರೂಪಿಸಲಾಗಿದ್ದ ‘ಜಾಂಬೋಟಿ ಜೇನು’ ಬ್ರಾೃಂಡ್ ಯೋಜನೆ ನನೆಗುದಿಗೆ ಬಿದ್ದಿದೆ.
ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯ ಹೆಗ್ಗಳಿಕೆಗೆ ಕಾರಣವಾಗಬೇಕಿದ್ದ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಈ ಯೋಜನೆ ಅನುಷ್ಠಾನ ಮಾಡಿದರೆ ಸಾವಿರಾರು ಜೇನು ಕೃಷಿ ಮಾಡುವವರಿಗೆ ವರದಾನ ಆಗುತ್ತದೆ. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯೋಜನೆ ಅನುಷ್ಠಾನದಲ್ಲಿ ಮುತುವರ್ಜಿ ವಹಿಸುತ್ತಿಲ್ಲ. ಜಿಲ್ಲೆಯ ಅರಣ್ಯ ಆಧಾರಿತ ಹಾಗೂ ತೋಟಗಾರಿಕಾ ಪ್ರದೇಶದಲ್ಲಿ ರೈತರು ನೈಸರ್ಗಿಕವಾಗಿ ಜೇನುಕೃಷಿಯಲ್ಲಿ ತೊಡಗಿದ್ದಾರೆ. ಆದರೆ, ಅವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿದ್ದಾರೆ. ಜತೆಗೆ ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಜೇನುತುಪ್ಪಕ್ಕೆ ಬ್ರಾೃಂಡ್ ಮಾನ್ಯತೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೂಪಿಸಲಾಗಿದ್ದ ಯೋಜನೆ ನನೆಗುದಿಗೆ ಬಿದ್ದಿದೆ.
‘ಜಾಂಬೋಟಿ ಜೇನು’ ಬ್ರಾೃಂಡ್: ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಖಾನಾಪುರ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಪ್ರದೇಶ. ಜೇನುಕೃಷಿಗೆ ಹೇಳಿ ಮಾಡಿಸಿದಂತಿದೆ. ಜಾಂಬೋಟಿ ಪ್ರದೇಶದಲ್ಲಿ ಹೆಚ್ಚಾಗಿ ಜೇನುಕೃಷಿ ಇದೆ. ಇದನ್ನೇ ಬ್ರಾೃಂಡ್ ಮಾಡಿ, ರಾಜ್ಯ, ಅಂತಾರಾಜ್ಯಗಳಿಗೆ ಸರಬರಾಜು ಮಾಡುವುದಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಈ ಯೋಜನೆ ಭಾಗವಾಗಿ ಖಾನಾಪುರ ತಾಲೂಕಿನ ಜಾಂಬೋಟಿಯಿಂದ ಒಂದು ಕಿ.ಮೀ. ದೂರದ ಗೋವಾ ರಸ್ತೆಯಲ್ಲಿರುವ ಜೇನುಕೃಷಿ ತರಬೇತಿ ಕೇಂದ್ರದಲ್ಲಿ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಒಂದೂವರೆ ವರ್ಷ ಕಳೆದರೂ ಯೋಜನೆ ಕೈಗೂಡಿಲ್ಲ.
ಸರ್ಕಾರಕ್ಕೆ ಪ್ರಸ್ತಾವನೆ: ಜಾಂಬೋಟಿಯ ಜೇನು ಕೃಷಿ ಸಾಕಣೆ ತರಬೇತಿ ಕೇಂದ್ರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪನೆಗೆ ತೋಟಗಾರಿಕೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲೆಯ ರೈತರಿಂದ ಜೇನುತುಪ್ಪ ಸಂಗ್ರಹಿಸಿ ವಿದೇಶಕ್ಕೂ ರಫ್ತು ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಜಾಂಬೋಟಿ ಜೇನು ಹಾಗೂ ಸಹ ಉತ್ಪನ್ನಗಳ ಸಂಸ್ಕರಣಾ ಘಟಕದಲ್ಲಿ ನೇರವಾಗಿ ಸ್ಥಳೀಯ ಜನಕ್ಕೆ ಉದ್ಯೋಗಾವಕಾಶ ನೀಡುವುದು ಚಿಂತನೆ ಇದೆ. ಜತೆಗೆ ಜಾಂಬೋಟಿ ರಸ್ತೆಯು ಪ್ರವಾಸಿಗರ ಪ್ರಮುಖ ರಸ್ತೆಯಾಗಿದ್ದರಿಂದ ಇಲ್ಲಿ ಸಂಸ್ಕರಣ ಘಟಕದಲ್ಲಿ ಮಾರಾಟ ಮಳಿಗೆ ತೆರೆದು ಉತ್ಪನ್ನ ಮಾರಾಟಕ್ಕೆ ಯೋಜಿಸಿದ್ದರು.
ಈ ಭಾಗ ಪಶ್ಚಿಮ ಘಟ್ಟ ಪ್ರದೇಶವಾಗಿದ್ದರಿಂದ ಜೇನು ಸಾಕಣೆಗೆ ಪೂರಕ ವಾತಾವರಣವಿದೆ. ಹೀಗಾಗಿ ಜೇನು ಸಾಕಾಣಿಕೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಿ ಉತ್ಕೃಷ್ಟವಾದ ಜೇನು ತುಪ್ಪ ಸಂಗ್ರಹಕ್ಕೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ. ಖಾನಾಪುರ, ಕಿತ್ತೂರು, ಬೈಲಹೊಂಗಲ ಸೇರಿ ಜಿಲ್ಲೆಯ ಬಹಳಷ್ಟು ತಾಲೂಕುಗಳಲ್ಲಿ ಕೃಷಿಯೊಂದಿಗೆ ಜೇನುಕೃಷಿಗೆ ಉತ್ತಮ ವಾತಾವರಣವಿದೆ. ಆದರೆ, ಇದರ ಬಗ್ಗೆ ರೈತರಿಗೆ ಅರಿವಿಲ್ಲ. ರೈತರಿಗೆ ಜೇನು ಸಾಕಣೆಗೆ ತರಬೇತಿ ನೀಡುವ ಯೋಜನೆಯೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ.
‘ಜಾಂಬೋಟಿ ಜೇನು ಬ್ರಾೃಂಡ್’ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಅನುದಾನ ಬಿಡುಗಡೆಯಾದ ಬಳಿಕ ಯೋಜನೆ ಅನುಷ್ಠಾನ ಆಗಲಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ.| ಮಹಾಂತೇಶ ಮುರಗೋಡ,ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ