ಜಮಖಂಡಿ: ಜಮಖಂಡಿ ತಾಲೂಕು ಕ್ರೀಡೆಯಲ್ಲಿ ಹೆಸರು ಗಳಿಸುವಲ್ಲಿ ಕೇಂದ್ರ ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡರ ಪಾತ್ರವನ್ನು ಎಂದಿಗೂ ಮರೆಯಲಾಗದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಹುನ್ನೂರು ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾದೇವಿ ಗೆಳಯರ ಬಳಗ ಹಾಗೂ ವೈಎಂಸಿ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪುರುಷರ ಮುಕ್ತ ಖೋಖೋ ಪಂದ್ಯಾವಳಿ ಹಿನ್ನೆಲೆ ವೈಎಂಸಿ ಸ್ಪೋರ್ಟ್ಸ್ ಕ್ಲಬ್‌ಗೆ ಶಾಸಕ ಆನಂದ ನ್ಯಾಮಗೌಡ ಮಂಜೂರು ಮಾಡಿದ ಮ್ಯಾಟ್ ಬಳಸಿ ಸಿದ್ಧಪಡಿಸಿದ ಮೈದಾನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಮಖಂಡಿ ತಾಲೂಕು ಕ್ರೀಡೆಯಲ್ಲಿ ಹೆಸರು ಗಳಿಸುವಲ್ಲಿ ಕೇಂದ್ರ ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡರ ಪಾತ್ರವನ್ನು ಎಂದಿಗೂ ಮರೆಯಲಾಗದು. ರಾಷ್ಟ್ರೀಯ ಸೈಕ್ಲಿಂಗ್, ಕುಸ್ತಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿ ಜಮಖಂಡಿ ನಗರವನ್ನು ದೇಶ್ಯಾದ್ಯಂತ ಗುರುತಿಸುವಂತೆ ಮಾಡಿದ್ದಾರೆ. ಅವರಲ್ಲಿದ್ದ ಕ್ರೀಡಾಸಕ್ತಿ ಪರಿಣಾಮವಾಗಿ ಅನೇಕ ಗ್ರಾಮೀಣ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಲು ಸಾಧ್ಯವಾಯಿತು ಎಂದು ಬಣ್ಣಿಸಿದರು. ಅವರ ಪುತ್ರ ಶಾಸಕ ಆನಂದ ನ್ಯಾಮಗೌಡ ತಂದೆ ಮಾರ್ಗದಲ್ಲಿ ನಡೆದು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿ ಒಂದೊಂದು ಕ್ರೀಡೆಯಲ್ಲಿ ಗುರುತಿಸಿಕೊಂಡಿವೆ. ಖೋಖೋ ಆಟದಿಂದ ಖ್ಯಾತಿ ಪಡೆದಿರುವ ಹುನ್ನೂರು ಗ್ರಾಮದ ಮೇಲೆ ನನ್ನ ತಂದೆ ಅಪಾರ ಅಭಿಮಾನ ಹೊಂದಿದ್ದರು. ನಾನು ಕೂಡ ಗ್ರಾಮದ ಮೇಲಿನ ಅಭಿಮಾನದಿಂದಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವೆ. ಶತಮಾನದ ಶಾಲೆ ಅಭಿವೃದ್ಧಿಗೂ ಪ್ರಯತ್ನಿಸುತ್ತಿರುವೆ ಎಂದರು.
ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದರು. ಮುಖಂಡ ಡಾ.ಪದ್ಮಜಿತ ನಾಡಗೌಡ, ಜಮಖಂಡಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ಮೈಗೂರ, ಸದಸ್ಯರು, ಜಮಖಂಡಿ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಧರೆಪ್ಪ ತೇಲಿ, ಗ್ರಾಮದ ಹಿರಿಯರಾದ ಶೇಖರ ಸಾವಳಗಿ, ಪಿಕೆಪಿಎಸ್ ಅಧ್ಯಕ್ಷ ಚನ್ನಪ್ಪ ಸಾವಳಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಸವಣೂರ, ರೇಣುಕಾದೇವಿ ಗೆಳೆಯರ ಬಳಗದ ಅಧ್ಯಕ್ಷರು, ವೈಎಂಸಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಇದ್ದರು.
12 ತಂಡಗಳು ಭಾಗಿ
ಪಂದ್ಯಾವಳಿಯಲ್ಲಿ ಹುನ್ನೂರು ಗ್ರಾಮದ ವೈಎಂಸಿ, ಬೆಳಗಾವಿ, ಕುಂದರಗಿ, ಅಮ್ಮಲಜೇರಿ, ಬಿದರಿ ಸೇರಿ 12 ತಂಡಗಳು ಭಾಗವಹಿಸಿವೆ.
EndFragment