ಜಿಲ್ಲೆ

ಇಬ್ಬರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ಮಗಳೊಂದಿಗೆ ಸೇರಿಕೊಂಡು ಗಂಡನನ್ನೆ ಕೊಲೆ ಮಾಡಿದ್ದ ಹೆಂಡತಿ ಹಾಗೂ ಮಗಳಿಗೆ ಜೀವಾವಧಿ ಶಿಕ್ಷೆ, ತಲಾ 10 ಸಾವಿರ ರೂ. ದಂಡ ವಿಧಿಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎ.ಕೆ. ನವೀನಕುಮಾರಿ ಆದೇಶ ಹೊರಡಿಸಿದ್ದಾರೆ.

ಮುಧೋಳ ತಾಲೂಕಿನ ಭಂಟನೂರ ಗ್ರಾಮದ ರೇಣವ್ವ ಗಡ್ಡದ, ಕಾಶವ್ವ ಗಡ್ಡದ ಶಿಕ್ಷೆಗೊಳಗಾದ ಅಪರಾಧಿಗಳು. ಬಂಟನೂರ ಗ್ರಾಮದ ಮೃತ ಚಂದ್ರಪ್ಪ ಸತ್ಯಪ್ಪ ಗಡ್ಡದ 2ನೇ ಮದುವೆ ಆಗುವುದಕ್ಕೆ ಒಪ್ಪಿಗೆ ನೀಡುವಂತೆ ಪತ್ನಿ ರೇಣವ್ವಳ ಜತೆ ಜಗಳವಾಡುತಿದ್ದ. ಒಪ್ಪಿಗೆ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ 2019ರ ಜನವರಿ 9 ರಂದು ಮೃತನ ಪತ್ನಿ ರೇಣವ್ವ ಹಾಗೂ ಮಗಳು ಕಾಸವ್ವ ಹಾಗೂ ಇನ್ನೋರ್ವ ಮಗಳು ಮತ್ತು ಮೃತನ ಜಮೀನಿನಲ್ಲಿ ಕಾರ್ಯನಿರ್ವಹಿಸುವವನ ಜತೆಗೂಡಿ ಕೊಲೆ ಮಾಡಿ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಿದ್ದರು. ಆದರೆ ಮೃತನ ಸಹೋದರಿ ರಂಗವ್ವ ಅಡಿವೆಪ್ಪ ಕರಿಗಾರ ಅವರು ಮೃತನ ಮೈಮೇಲಿನ ಗುರುತುಗಳಿಂದ ಸಂಶಯಾಸ್ಪದ ಸಾವು ಎಂದು ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂದಿನ ಸಿಪಿಐ ಕರಿಯಪ್ಪ ಬನ್ನೆ ಅವರು ತನಿಖೆ ನಡೆಸಿ 4 ಜನರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಕೊಲೆಯಲ್ಲಿ ಓರ್ವ ಮಗಳು ಹಾಗೂ ಜಮೀನಿನಲ್ಲಿ ಕಾರ್ಯನಿರ್ವಹಿಸುವವನ ಮೇಲಿನ ಆಪಾದನೆ ರುಜುವಾತುವಾಗಿಲ್ಲ ಎಂದು ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.

EndFragment