ಜಿಲ್ಲೆ

ವಿವಿಧ ಬೇಡಿಕೆ ಈಡೇರಿಸಿ

ಜಮಖಂಡಿ: ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿನ ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಹಳೇ ತಹಸೀಲ್ದಾರ್ ಕಚೇರಿ ಆವರಣದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಎ.ಕೆ. ಇಂಡಿಕರ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕಾಧ್ಯಕ್ಷ ಡಾ.ಎಸ್.ಎಂ. ವಡಗಾಂವಕರ ಮಾತನಾಡಿ, ಸೇವಾ ಭದ್ರತೆ ನೀಡಿ ಖಾಯಂಗೊಳಿಸುವುದು, ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡುವುದು, ಸಮಾನ ಕೆಲಸಕ್ಕೆ ಸಮಾನ ವೇತನ,ನೇರವಾಗಿ ಇಲಾಖೆಯಿಂದ ವೇತನ ಪಾವತಿ, ಒಳಗುತ್ತಿಗೆ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಹೊರಗುತ್ತಿಗೆ ನೌಕರರಿಗೂ ನೀಡುವುದು, ಸರ್ಕಾರಿ ನೇಮಕಾತಿಗಳಲ್ಲಿ ವಯಸ್ಸಿನ ಮಿತಿ ವಿಸ್ತರಣೆ, ಸೇವಾನುಭವ ತಕ್ಕಂತೆ ಸೇವಾಂಕ ನೀಡುವುದು ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಸಂತೋಷ ಟಿರಕಿ, ಖಜಾಂಚಿ ಈರಪ್ಪ ಪರೀಟ, ಶಂಕ್ರಮ್ಮ ಹಿಪ್ಪರಗಿ, ಮಂಜುನಾಥ ಲಮಾಣಿ, ಹನುಮಂತ ಕಾಂಬಳೆ, ಡಾ.ದೀಪಕ ವಸದ, ಮುರುಗೇಶ ತುಪ್ಪದ, ರಾಯಪ್ಪ ಹರಿಜನ, ವಿಜಯ ಘೋರ್ಪಡೆ, ಆರತಿ ಅಂಬಿಗೇರ, ರವಿಚಂದ್ರ ಪಾಟೀಲ, ಸಲ್ಮಾ ನದಾಫ್ ಇತರರು ಇದ್ದರು.

EndFragment