ಜಿಲ್ಲೆ

ಕಾವೇರಿ ಸಂಪರ್ಕ ಅರ್ಜಿ ಸರಳೀಕರಿಸಲು ಜಲಮಂಡಳಿ ಅಧ್ಯಕ್ಷರ ಸೂಚನೆ

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಲ್ಲಿರುವ ಜನರಿಗೆ ಅವರ ಮನೆ ಬಾಗಿಲಿಗೆ ತೆರಳಿ ಕಾವೇರಿ ಕುಡಿಯುವ ನೀರು ಸಂಪರ್ಕದ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಸಂಸ್ಥೆಯ ಅಧಿಕಾರಿ-ಸಿಬ್ಬಂದಿಗೆ ಸೂಚಿಸಿದ್ದಾರೆ.

ನಗರದ ಪೂರ್ವ ವಲಯದಲ್ಲಿರುವ ಚನ್ನಸಂದ್ರ ಭಾಗದಲ್ಲಿ ಜಲಮಂಡಳಿ ಆಯೋಜಿಸಿದ್ದ ಕಾವೇರಿ ಸಂಪರ್ಕ ಅಭಿಯಾನದ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಅಲ್ಲಿನ ಪ್ರಕ್ರಿಯೆ ಕುರಿತು ಪರಿಶೀಲಿಸಿ ಕೆಲ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಸೂಚಿಸಿದರು.

ಈಗಾಗಲೇ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಜಲಮಂಡಳಿ ಸಜ್ಜಾಗಿದೆ. ಹೆಚ್ಚುವರಿ ನೀರು ಕೂಡ ನಗರಕ್ಕೆ ಸರಬರಾಜು ಆಗುತ್ತಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜನರು ಸಂಪರ್ಕ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಬೇಸಿಗೆ ಸಂದರ್ಭದಲ್ಲಿ ಕೊಳವೆ ಬಾವಿಗಳಲ್ಲಿ ನೀರಲ್ಲದೆ ಉಂಟಾದ ಸಮಸ್ಯೆ ಮತ್ತೊಮ್ಮೆ ಮರುಕಳಿಸದಿರಲು ಜನರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಬೇಕು. ಇದಕ್ಕಾಗಿ ಅಭಿಯಾನ ಆರಂಭಿಸಿದ್ದು, ಜನರು ಆನ್‌ಲೈನ್ ಮೂಲಕ ಅಥವಾ ಅಭಿಯಾನ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಮನೆ ಬಾಗಿಲಿಗೆ ಅರ್ಜಿ ವಿತರಣೆ:

ಮುಂಬರುವ ದಿನಗಳಲ್ಲಿ ಜಲಮಂಡಳಿಯ ಸಿಬ್ಬಂದಿ ಕಾವೇರಿ ನೀರು ಸಂಪರ್ಕ ಅಭಿಯಾನದ ಭಿತ್ತಿಪತ್ರ, ಅರ್ಜಿ ಹಾಗೂ ಠೇವಣಿ ಶುಲ್ಕದ ವಿವರಗಳನ್ನು ಒಳಗೊಂಡಿರುವ ಮಾಹಿತಿಯನ್ನು ಮನೆ ಬಾಗಿಲಿಗೆ ತಲುಪಿಸಲಿದೆ. ಸಂಸ್ಥೆಯ ನೌಕರರು ಮನೆ ಬಾಗಿಲಿಗೆ ತೆರಳಿ ಇವುಗಳನ್ನು ನೀಡಿ ಅಭಿಯಾನ ನಡೆಯುತ್ತಿರುವ ಸ್ಥಳ, ದಿನ ಹಾಗೂ ಸಮಯದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗವನ್ನು ನಾಗಿಕರು ಪಡೆದುಕೊಳ್ಳಬೇಕು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.