ಶ್ರೀ ಸಪ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ದನಗಳ ಜಾತ್ರೆಗೆ ಸೇರಿರುವ ಎತ್ತುಗಳು. 
ಜಿಲ್ಲೆ

ಜಲ್ಲಿಕಟ್ಟು ದನಗಳ ಆಕರ್ಷಣೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

7 ದಿನಗಳ ಸಪ್ಲಮ್ಮ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಹೊಸೂರು: ಇಲ್ಲಿನ ದಕ್ಷಿಣ ಪಿನಾಕಿನಿ ದಡದಲ್ಲಿನ ಪುರಾಣ ಪ್ರಸಿದ್ಧ ಶ್ರೀ ಸಪ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ದನಗಳ ಜಾತ್ರೆಗೆ ಚಾಲನೆ ದೊರೆಯಿತು. ಜಾತ್ರಾ ಮಹೋತ್ಸವದಲ್ಲಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಗಜೇಂದ್ರ ಮೂರ್ತಿ, ಉಪಾಧ್ಯಕ್ಷ ತ್ಯಾಗರಾಜನ್, ಕೃಷ್ಣಪ್ಪ, ಶಿವಾನಂದನ್, ರಾಜಾರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ಶಕ್ತಿದೇವತೆಗಳ ನೆಲೆಬೀಡು ಎನಿಸಿರುವ ಇಲ್ಲಿನ ಸ್ಥಳದಲ್ಲಿ ಪ್ರಾಚೀನ ಕಾಲದಿಂದಲೂ ದನಗಳ ಜಾತ್ರೆ ನಡೆಯುತ್ತಿದ್ದು, ನೂರಾರು ಸಂಖ್ಯೆಯ ಜೋಡೆತ್ತುಗಳು ಜಾತ್ರೆಯಲ್ಲಿ ಜಮಾವಣೆಯಾಗಿವೆ.

ಶ್ರೀ ಸಪ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದನಗಳ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು. ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಕ್ಕದ ತಿಮ್ಮಚಂದ್ರಂ ಗ್ರಾಮದಲ್ಲಿನ ಈ ದೇವಾಲಯದ ಆವರಣದಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ ಈ ಸುತ್ತಮುತ್ತಲ ಭಾಗದಲ್ಲಿ ಪ್ರಸಿದ್ಧ ಎನಿಸಿರುವ ದನಗಳ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ದೇಶಿ ತಳಿಗಳ ಆಕರ್ಷಣೆ: ಸುಮಾರು 200 ವರ್ಷದ ಇತಿಹಾಸ ಇದೆ ಎನ್ನಲಾದ ಈ ಜಾತ್ರೆಯಲ್ಲಿ ದೇಶಿಹಸು ಹಾಗೂ ಜಲ್ಲಿಕಟ್ಟು ದನಗಳು ಹೆಚ್ಚಿನ ಆಕರ್ಷಣೆಯಾಗಿವೆ. ಇಂಥ ಅಪರೂಪ ತಳಿಯ ಜಾನುರಾರು ವ್ಯಾಪಾರ ಜೋರಾಗಿ ನಡೆಯುತ್ತದೆ. ಕರ್ನಾಟಕ ಸೇರಿ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಪಾಂಡಿಚೇರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಎಲ್ಲ ಭಾಗಗಳಿಂದಲೂ ದನಗಳು ಜಮಾವಣೆಯಾಗುತ್ತವೆ. ಗೋವಿನ ಹಬ್ಬವೆಂದೇ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಈ ಜಾತ್ರೆ ಈ ಭಾಗದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

5 ಲಕ್ಷ ರೂಪಾಯಿವರೆಗೆ ಜೋಡೆತ್ತುಗಳ ಮಾರಾಟ: ಇಲ್ಲಿ ಜೋಡಿ ದನಗಳೂ 1 ಲಕ್ಷ ರೂಪಾಯಿಂದ 5 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತವೆ. 7 ದಿನಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದೆ. ಜ.27ರಿಂದ ಫೆ.3ರವೆಗೆ ನಡೆಯುವ ಈ ಜಾತ್ರೆಯಲ್ಲಿ ರಥೋತ್ಸವ, ಆರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ದಿನವು ಒಂದೊಂದು ವಿಶೇಷ ಕಾರ್ಯಕ್ರಮಗಳ ಮೂಲಕ ಜಾತ್ರಾ ಮಹೋತ್ಸವ ಗಮನ ಸೆಳೆಯುತ್ತದೆ.ವರ್ಣರಂಜಿತ ಪಲ್ಲಕ್ಕಿ ಉತ್ಸವಜಾತ್ರೆ ಕಡೆಯ ದಿನದಂದು 67 ಗ್ರಾಮಗಳ ದೇವತೆಗಳನ್ನು ವರ್ಣರಂಜಿತ ಪಲ್ಲಕ್ಕಿ ಉತ್ಸವ ಹೆಚ್ಚು ಆಕರ್ಷಣೀಯವಾಗಿರುತ್ತದೆ. ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಪ್ರತೀ ವರ್ಷದಂದೆ ಈ ಬಾರಿಯೂ ದನಗಳ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜೋಡೆತ್ತುಗಳು ಜಮಾವಣೆಗೊಳ್ಳಲಿವೆ. ಇವುಗಳಿಗೆ ಬೇಕಾದ ಮೂಲಸೌಕರ್ಯ ಕಲ್ಪಿಸಲಾಗಿದೆ. ನೆರೆಯ ಜಿಲ್ಲೆಗಳು ಸೇರಿ ಅಕ್ಕಪಕ್ಕದ ರಾಜ್ಯದಿಂದಲೂ ದನಗಳು ಬರಲಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಯಲಿದೆ. -ಗಜೇಂದ್ರಮೂರ್ತಿ ದೇಗುಲದ ಟ್ರಸ್ಟಿ