ವಿಜಯಪುರ: ಜಲಜೀವನ ಮಿಷನ್ ಯೋಜನೆಯಡಿ ನಡೆಯುತ್ತಿರುವ ಅಕ್ರಮ ತಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಬುಧವಾರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಋಷಿ ಆನಂದಗೆ ಮನವಿ ಸಲ್ಲಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಜಾರಿಗೊಳಿಸಿದೆ. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದಾಗಿ ಕಾಮಗಾರಿ ಕಳಪೆಯಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದರು.
ಬಹುತೇಕ ಹಳ್ಳಿಗಳಲ್ಲಿ ಯೋಜನೆ ಇನ್ನೂ ಅನುಷ್ಟಾನಗೊಂಡಿಲ್ಲ. ಕಾಮಗಾರಿ ಕೈಗೊಂಡಿದ್ದರೂ ನೀರು ಬರುತ್ತಿಲ್ಲ. ಇನ್ನೂ ಕೆಲವು ಕಡೆ ಕಾಮಗಾರಿ ಕಳಪೆಯಾಗಿದೆ. ಹೀಗಾಗಿ ಶುದ್ಧ ಕುಡಿಯುವ ನೀರು ಜನಜಾಮಾನ್ಯರಿಗೆ ಮರೀಚಿಕೆಯಾಗಿದೆ ಎಂದರು.
ದೇವರಹಿಪ್ಪರಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಯೋಜನೆಯ ಸಮರ್ಪಕ ಅನುಷ್ಟಾನವಾಗಬೇಕು. ಮನೆ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಮೂಲಕ ಬರದ ನಾಡಿಗೆ ಜೀವ ಜಲ ಒದಗಿಸಿದರೆ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಪುಣ್ಯ ತಟ್ಟುತ್ತದೆ ಎಂದರು.
ಮುಖಂಡರಾದ ರಾಕೇಶ ಇಂಗಳಗಿ, ಹಮೀದ್ ಇನಾಮದಾರ, ಪ್ರವೀಣ ಕನಸೆ ಮತ್ತಿತರರು ಇದ್ದರು.