ಜಿಲ್ಲೆ

ತುಪ್ಪದಹಳ್ಳಿ ನಿರಂತರ ನೀರು ಪೂರೈಸುವ ಗ್ರಾಮ

ಜಗಳೂರು: ಜಲಜೀವನ್ ಮಿಷನ್ ಅಡಿ ಗ್ರಾಮೀಣರ ಮನೆಗಳಿಗೆ ನಳಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ- ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ತುಪ್ಪದಹಳ್ಳಿ 24/7 ನೀರು ಸರಬರಾಜು ಮಾಡುವ ಗ್ರಾಮ ಎಂದು ಬುಧವಾರ ಘೊಷಿಸಿ ಮಾತನಾಡಿದರು.

ಸರ್ಕಾರ ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯಲ್ಲಿ 14 ಹಳ್ಳಿಗಳನ್ನು ಹಾಗೂ ಜಗಳೂರು ತಾಲೂಕಿನ ತುಪ್ಪದಹಳ್ಳಿ ಗ್ರಾಮವನ್ನು ಯೋಜನೆಯಡಿ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ 9 ಗ್ರಾಮಗಳಲ್ಲಿ ಜಾರಿ ಆಗಲಿದೆ ಎಂದು ತಿಳಿಸಿದರು.

ಜಗಳೂರು ಬರಪೀಡಿತ ತಾಲೂಕು, ನೀರಾವರಿ ಇಲ್ಲ, ಕುಡಿವ ನೀರಿನ ಸಮಸ್ಯೆ ಇದೆ ಎಂಬುದು ಪ್ರತೀತಿ. ಆದರೆ ಸಿರಿಗೆರೆಯ ಡಾ. ಶಿವಮೂರ್ತಿ ಸ್ವಾಮಿಗಳು ಸರ್ಕಾರದ ಮೇಲೆ ಒತ್ತಡ ಹೇರಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಡಿಸಿದರು.

ಸಿದ್ದರಾಮಯ್ಯ ಸೇರಿ ಮೂವರು ಸಸಿಎಂಗಳ ಮೇಲೆ ಒತ್ತಡ ಹಾಕಿ ಅಂತಿಮವಾಗಿ ಕೆರೆಗಳಲ್ಲಿ ನೀರು ತುಂಬುವಂತೆ ಮಾಡಿದರು. ಪರಿಣಾಮ ರೈತರು ಹೆಚ್ಚು ಅಡಕೆ ಹಾಕುತ್ತಿದ್ದು, ಕೆಲವೇ ವರ್ಷಗಳಲ್ಲಿ ಅರೆ ಮಲೆನಾಡು ಆಗಲಿದೆ ಎಂದರು.

ಯೋಜನಾಧಿಕಾರಿ ನಂದಕುಮಾರ್ ಮಾತನಾಡಿ ಕೆಲ ಗ್ರಾಮಗಳಲ್ಲಿ ನಿತ್ಯ ಕಾಯಕ ಬಿಟ್ಟು ನೀರು ಹಿಡಿಯುವುದೇ ದೊಡ್ಡ ಕೆಲಸವಾಗಿತ್ತು. ಆದರೆ ಈ ಯೋಜನೆಯ ಈ ಗೋಜು ಈಗ ದೂರವಾಗಿದೆ. ಸ್ಥಳೀಯ ಸ್ವ- ಸಹಾಯ ಸಂಘಗಳ ಮೂಲಕ ನೀರು ಸರಬರಾಜು ಯೋಜನೆ ನಿರ್ವಹಿಸಲಾಗುವುದು. ಪಂಚತಂತ್ರದಲ್ಲಿ ದೂರು ಸಲ್ಲಿಸಿದ 2 ಗಂಟೆ ಒಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ಕೆಂಚಪ್ಪ ಮಾತನಾಡಿ, ನೀರು ಪೋಲು ಮಾಡಬೇಡಿ. ಸಮರ್ಪಕವಾಗಿ ಯೋಜನೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಧಿಕ್ ಉಲ್ಲಾಖಾನ್ ಮಾತನಾಡಿ, ತಾಲೂಕಿನಲ್ಲಿ 10 ಗ್ರಾಮಗಳನ್ನು ಸರ್ಕಾರ ಆಯ್ಕೆ ಮಾಡಿದೆ, ತುಪ್ಪದಹಳ್ಳಿಯಿಂದ ಆರಂಭವಾಗಿದೆ ಎಂದರು.

ಜಿಪಂ ಎಇಇ ಶಿವಮೂರ್ತಿ, ಸಿಡಿಪಿಒ ಬೀರೇಂದ್ರ ಕುಮಾರ್, ಟಿಎಚ್​ಒ ವಿಶ್ವನಾಥ್, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ. ಲಿಂಗರಾಜ್, ಗ್ರಾಪಂ ಅಧ್ಯಕ್ಷೆ ರಾಧಮ್ಮ ಕುಬೇರಪ್ಪ, ಉಪಾಧ್ಯಕ್ಷೆ ಲಲಿತಮ್ಮ, ನರೇಗಾ ಎಡಿ ಮರುಳಸಿದ್ದಪ್ಪ, ಪಿಡಿಒ ಅನಿಲ್​ಕುಮಾರ್, ರೇಣುಕಮ್ಮ, ಗ್ರಾಪಂ ಸದಸ್ಯರು ಸೇರಿ ಮತ್ತಿತರರಿದ್ದರು.

ಜನರ ಕೈ ಹಿಡಿದಿದೆ ಗ್ಯಾರಂಟಿ: ಐದು ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿವೆ. ಕಾಂಗ್ರೆಸ್ ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳ ಮಹತ್ವವನ್ನು ಪ್ರತಿ ಮನೆ,ಮನೆಗೆ ತಲುಪಿಸಬೇಕು. ಗ್ಯಾರಂಟಿ ಜಾರಿಯಿಂದ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಮಾತಿನಲ್ಲಿ ಹುರುಳಿಲ್ಲ ಎಂದು ಶಾಸಕ ದೇವೇಂದ್ರಪ್ಪ ಟೀಕಿಸಿದರು.