ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಮನೆಗಳಿಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ತರ ಯೋಜನೆ ಜಲಜೀವನ ಮಿಷನ್ ಬದ್ಧತೆ ಕೊರತೆಯಿಂದ ನಿಷ್ಪ್ರಯೋಜಕವಾಗಿದೆ. ಸ್ವಾತಂತ್ರಾೃನಂತರ ದೇಶದಲ್ಲಿ ಅನುದಾನದ ಮಿತಿಯಿಲ್ಲದೆ ಜಾರಿಗೆ ತಂದ ಮೊದಲ ಯೋಜನೆ ಜಲಜೀವನ್ ಮಿಷನ್ ಜಿಲ್ಲೆಯ ಮಟ್ಟಿಗೆ ನಿರ್ಜೀವಗೊಂಡಿದೆ.
ಜಲಜೀವನ ಮಿಷನ್ ಮೊದಲ ಹಂತದ ಯೋಜನೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಕಾಬಿಟ್ಟಿ ಅನುಷ್ಠಾನ, ಗ್ರಾಪಂ ಸದಸ್ಯರ ನಿಷ್ಕ್ರಿಯತೆಯಿಂದಾಗಿ ಹಳ್ಳಹಿಡಿಯುತ್ತಿದೆ. ಇದಕ್ಕೆ ಸಾಕ್ಷಿ ನಾಡಾ ಮತ್ತು ಬಿಜೂರು ಗ್ರಾಪಂ. ನಾಡಾ ಗ್ರಾಪಂ ಜಲಜೀವನ ಮಿಷನ್ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ನೀರು ಸ್ನಾನಕ್ಕೂ ಉಪಯೋಗವಿಲ್ಲ ಎಂಬಂತಾಗಿದೆ. ಬೀಜಾಡಿಯಲ್ಲಿ ಸವಳು ನೀರಿನ ಬಾವಿ ಬಳಿ 40 ಲಕ್ಷ ರೂ.ವೆಚ್ಚದಲ್ಲಿ ಮತ್ತೊಂದು ಬಾವಿ ತೋಡಿದ್ದು, ಅದರ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ.ಫಿಲ್ಟರ್ ಮಾಡಿ ನೀರು ಪೂರೈಸುತ್ತೇವೆ ಎನ್ನುವ ಮೂಲಕ ಗ್ರಾಮ ಪಂಚಾಯಿತಿ ತಿಪ್ಪೆ ಸಾರಿಸುತ್ತಿದೆ.
155 ಗ್ರಾಪಂಗಳಲ್ಲಿ ಅನುಷ್ಠಾನ: ಪ್ರಸಕ್ತ ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ನೀರು ಪೂರೈಸಲು ಬಾವಿ, ಇನ್ನಿತರ ನೀರಿನ ಮೂಲಗಳನ್ನು ಗುರುತಿಸಿ ತುರ್ತು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನದಿ ನೀರು ಬಳಸಿ ಪೂರೈಸುವುದು ಯೋಜನೆಯ ಮೂಲ ಉದ್ದೇಶ. ಕಾರ್ಕಳ ಹಾಗೂ ಉಡುಪಿಗೆ ವಾರಾಹಿ ನದಿ ನೀರು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಕ್ರಿಯಾಯೋಜನೆ ಪ್ರಗತಿಯಲ್ಲಿದೆ. ಸೌಕೂರು ಏತ ನೀರಾವರಿ ಮೂಲಕ ನಡೆಯುತ್ತಿರುವ ಕಾಮಗಾರಿ ಸಿದ್ದಾಪುರ ನೀರಿನ ಯೋಜನೆಯೂ ಹೌದು.
ಅನುದಾನ ವಿವರ: ಉಡುಪಿ ಜಿಲ್ಲೆಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ 15.52 ಕೋಟಿ ರೂ. ಕಾರ್ಕಳ, ಹೆಬ್ರಿ ತಾಲೂಕು-8.80 ಕೋಟಿ, ಕುಂದಾಪುರ 1.24ಕೋಟಿ ರೂ, ಬೈಂದೂರು 39 ಲಕ್ಷ ರೂ., ಉಡುಪಿ 1.56 ಕೋಟಿ ರೂ., ಕಾಪು 1.20 ಕೋಟಿ ರೂ.ಮತ್ತು ಬ್ರಹ್ಮಾವರ 2.80 ಕೋಟಿ ರೂ.. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹೊರತುಪಡಿಸಿ ಜಿಲ್ಲೆಯ 155 ಗ್ರಾಮಗಳು ಜಲಜೀವನ ಮಿಷನ್ ಯೋಜನೆ ವ್ಯಾಪ್ತಿಗೆ ಸೇರಿವೆ.
ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆ ಜನಪ್ರತಿನಿಧಿಗಳು, ಅಧಿಕಾರಿಗಳ ಬದ್ಧತೆಯ ಕೊರತೆಯಿಂದ ನಿಷ್ಪ್ರಯೋಜಕವಾಗಿದೆ. ಬೀಜಾಡಿ ಗ್ರಾಪಂ ಹಿಂದೆ ಇದ್ದ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಗೊತ್ತಿದ್ದರೂ ಅದೇ ಜಾಗದಲ್ಲಿ ಬಾವಿ ತೆಗೆಯುವ ಮೂಲಕ ಯೋಜನೆ ದುರುಪಯೋಗ ಮಾಡಿಕೊಂಡಿದೆ. ಈ ಬಗ್ಗೆ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆಯುತ್ತೇವೆ.
ರಾಜು ಬೆಟ್ಟಿನಮನೆ, ಅಧ್ಯಕ್ಷ, ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಶಾಖೆ
ಜಲಜೀವನ ಮಿಷನ್ 3 ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಫಸ್ಟ್ ಸ್ಟೇಜ್ ಟೆಂಡರ್ ಆಗಿದೆ. 2ನೇ ಹಂತ ಟೆಂಡರ್ ಹಂತದಲ್ಲಿದ್ದು, ಮೂರನೇ ಹಂತ ಎಸ್ಟಿಮೇಟ್ ಹಂತದಲ್ಲಿದೆ. ಎಲ್ಲರ ಮನೆಗೆ ನೀರು ಪೂರೈಸುವುದು ಈ ಯೋಜನೆಯ ಮೂಲ ಉದ್ದೇಶ. ಬೀಜಾಡಿ ಹಾಗೂ ನಾಡಾ ಗ್ರಾಮ ಜಲಜೀವನ ಮಿಷನ್ ಯೋಜನೆ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯೋಜನೆ ಜಿಲ್ಲೆಯ ಎಲ್ಲ ಭಾಗಕ್ಕೆ ಕವರ್ ಅಗುವಂತೆ ಸಾವಿರದ ಐನೂರು ಕೋಟಿ ರೂ.ಮೊತ್ತಕ್ಕೆ ಟೆಂಡರ್ ಆಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಪ್ರಸನ್ನ ಎಚ್. ಸಿಇಒ, ಜಿಪಂ, ಉಡುಪಿ.