ಜಿಲ್ಲೆ

ಚಿಂಗಾಣಿಗುಡ್ಡೆ ಟ್ಯಾಂಕ್‌ಗೆ ಜಲಭಾಗ್ಯ

Avinash R

ಸುಬ್ರಹ್ಮಣ್ಯ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಸುಮಾರು 10 ವರ್ಷ ಆದ ಬಳಿಕ ಟ್ಯಾಂಕ್‌ಗೆ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸಲಾಗಿದೆ. ಸುಮಾರು 10 ವರ್ಷಗಳ ಕಾಲ ಗ್ರಾಮಸ್ಥರ ಪ್ರಯೋಜನಕ್ಕೆ ಬಾರದ ಟ್ಯಾಂಕ್ ಉಪಯೋಗಕ್ಕೆ ದೊರಕುವ ಕಾಲ ಸನ್ನಿಹಿತವಾಗಿದೆ.

ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣನಗರದ ಚಿಂಗಾಣಿಗುಡ್ಡೆ ಎಂಬಲ್ಲಿ 10-11 ವರ್ಷಗಳ ಹಿಂದೆ ಅಂದಿನ ಜಿಪಂನ 20 ಲಕ್ಷ ರೂ. ಅನುದಾನದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಒಂದು ಶುದ್ಧೀಕರಣ ಟ್ಯಾಂಕ್ ಹಾಗೂ ಇನ್ನೊಂದು ನೀರು ತುಂಬುವ ಟ್ಯಾಂಕ್ ಇಲ್ಲಿ ನಿರ್ಮಾಣಗೊಂಡಿತ್ತು. ಆದರೆ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ಗ್ರಾಮಸ್ಥರಿಗೆ ಈ ಟ್ಯಾಂಕ್‌ನಿಂದ ನೀರು ಸರಬರಾಜಾಗಿರಲಿಲ್ಲ.

*ಟ್ಯಾಂಕ್‌ಗೆ ನೀರೇ ಹತ್ತಿಲ್ಲ: ಪಂಜ ಸಮೀಪದ ಕುಮಾರಧಾರಾ ನದಿಯಿಂದ ಜಾಕ್‌ವೆಲ್ ಮೂಲಕ ನೀರನ್ನು ಚಿಂಗಾಣಿಗುಡ್ಡೆಗೆ ಪೂರೈಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಎತ್ತರದ ಪ್ರದೇಶವಾದ ಚಿಂಗಾಣಿಗುಡ್ಡೆಯಲ್ಲಿ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಇಷ್ಟು ಎತ್ತರಕ್ಕೆ ನೀರು ಹತ್ತಲು ಸಾಧ್ಯವಾಗದೆ ನೀರು ಇಷ್ಟು ವರ್ಷ ಟ್ಯಾಂಕ್‌ಗೆ ಸರಬರಾಜು ಆಗಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಟ್ಯಾಂಕ್‌ಗೆ ಪೈಪ್‌ಲೈನ್ ಕಾಮಗಾರಿ ನಡೆಸಿದ್ದು, ಅದು ರಸ್ತೆ ಕಾಮಗಾರಿ ವೇಳೆ ಹಾನಿಗೊಂಡಿತ್ತು, ದುರಸ್ತಿಗೆ ಅನುದಾನ ಬಾರದೆ ಪೈಪ್‌ಲೈನ್ ಸಮರ್ಪಕವಾಗದೆ ಈ ರೀತಿ ಆಗಿದೆ ಎಂಬುದು ಅಧಿಕಾರಿಗಳ ಪ್ರತಿಕ್ರಿಯೆ ಆಗಿತ್ತು.

ಒಟ್ಟಿನಲ್ಲಿ ವಿವಿಧ ಕಾರಣ ನೀಡಿ ಚಿಂಗಾಣಿಗುಡ್ಡೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ಹನಿ ನೀರು ಟ್ಯಾಂಕ್‌ಗೆ ಬೀಳಲಿಲ್ಲ. ಅಲ್ಲಿಂದ ಗ್ರಾಮದ ಜನತೆಗೆ ನೀರು ಸರಬರಾಜು ಆಗಲೂ ಇಲ್ಲ.

ಪ್ರಾಯೋಗಿಕ ಕಾರ್ಯ ಯಶಸ್ವಿ

ಇದೀಗ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲ್‌ಜೀವನ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಚಿಂಗಾಣಿಗುಡ್ಡೆ ಕುಡಿಯುವ ನೀರಿನ ಟ್ಯಾಂಕ್‌ಗೆ ಜಾಕ್‌ವೆಲ್‌ನಿಂದ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ. ಟ್ಯಾಂಕ್‌ನಿಂದ ಗ್ರಾಮದ ಮನೆಗಳಿಗೆ ನೀರು ಪೂರೈಸಲು ಪೈಲ್‌ಲೈನ್ ಅಳವಡಿಸಲಾಗಿದೆ. ಶುದ್ಧೀಕರಣ ಟ್ಯಾಂಕ್‌ನಿಂದ ಇನ್ನೊಂದು ದೊಡ್ಡ ಟ್ಯಾಂಕ್‌ಗೆ ಪೈಪ್‌ಲೈನ್ ಮರು ಜೋಡಿಸಲಾಗಿದೆ. ಇತ್ತೀಚೆಗೆ ಪ್ರಾಯೋಗಿಕವಾಗಿ ಎರಡೂ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಪರೀಕ್ಷಿಸಲಾಗಿದೆ. ಇದು ಯಶಸ್ವಿಯಾಗಿದೆ. ಈ ಟ್ಯಾಂಕ್‌ನಿಂದ ನೀರು ಸರಬರಾಜಾಗುವ ಮನೆಗಳಿಗೆ ನಳ್ಳಿ ಸಂಪರ್ಕ ಅಳವಡಿಕೆ ಆದ ಕೂಡಲೇ ಟ್ಯಾಂಕ್‌ನಿಂದ ನೀರು ನೀಡಲು ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿ

ಚಿಂಗಾಣಿಗುಡ್ಡೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ಟ್ಯಾಂಕ್ ಉಪಯೋಗಕ್ಕೆ ದೊರಕದೆ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗಿತ್ತು. ಇದೀಗ ಈ ಟ್ಯಾಂಕ್‌ನ ಮೂಲಕ ನೀರು ಸರಬರಾಜಿಗೆ ಸಿದ್ಧತೆಗಳು ಅಂತಿಮಗೊಂಡಿದ್ದು, ಗ್ರಾಮಸ್ಥರಲ್ಲಿ ಸಂತಸವನ್ನುಂಟು ಮಾಡಿದೆ.

ಚಿಂಗಾಣಿಗುಡ್ಡೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ಪ್ರಯೋಜಕ್ಕೆ ಸಿಗದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದೀಗ ಟ್ಯಾಂಕ್‌ಗೆ ಪೈಪ್‌ಲೈನ್ ಅಳವಡಿಸುವ ಕೆಲಸ ನಡೆದಿದ್ದು, ಆದಷ್ಟು ಶೀಘ್ರ ಇದೇ ಟ್ಯಾಂಕ್‌ನಿಂದ ಮನೆಗಳಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಟ್ಯಾಂಕ್‌ನ ಗುಣಮಟ್ಟದ ಪರೀಕ್ಷೆ ನಡೆಸಬೇಕು. - ಜಿನ್ನಪ್ಪ ಗೌಡ ಅಳ್ಪೆ, ಸ್ಥಳೀಯರು https://www.vijayavani.net/pancha-guarantee-to-relieve-financial-burden https://www.vijayavani.net/karinja-yakshavasyam-anniversary