ದೊಡ್ಡಬಳ್ಳಾಪುರ: ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಶತಮಾನೋತ್ಸವ ಅ.19ರಂದು ಆರ್ಎಲ್ಜೆಐಟಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು. ನಗರದ ಆರ್ಎಲ್ಜೆಐಟಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ ಜಾಲಪ್ಪ ಅಕಾಡೆಮಿ ಕಟ್ಟಡ ಉದ್ಘಾಟಿಸಲಾಗುವುದು. ಪ್ರೊ.ಕೆ.ಆರ್.ರವಿಕಿರಣ್ ಬರೆದಿರುವ "ನೇರ ನಿಷ್ಠ್ಠುರ ನಡೆಯ ಹೃದಯವಂತ ಆರ್.ಎಲ್.ಜಾಲಪ್ಪ ಜೀವನ ಪಥ'ಪುಸ್ತಕವನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು. ಜಾಲಪ್ಪ ಶತಮಾನೋತ್ಸವ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶಿಲಾನ್ಯಾಸ ನೆರವೇರಿಸಲಿದ್ದು, ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಕಟ್ಟಡ ನಿಮಾರ್ಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಜೆ.ರಾಜೇಂದ್ರ ತಿಳಿಸಿದರು.
ಕಾಲೇಜು ರಜತ ಮಹೋತ್ಸವ : 18ರಂದು ನಡೆಯುವ ಬೆಳ್ಳಿ ಹಬ್ಬದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿದ್ಯಾಶಂಕರ್, ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಇತರರು ಭಾಗವಹಿಸಲಿದ್ದು, ಸಂಜೆ ಪ್ರಸಿದ್ಧ ಗಾಯಕಿ ಅನುರಾಧಾ ಭಟ್ ಹಾಗೂ ಗಾಯಕ ಕಂಬದ ರಂಗಯ್ಯ ತಂಡದಿಂದ ಸಾಂಸತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜೆ.ರಾಜೇಂದ್ರ ತಿಳಿಸಿದರು.
ಆರ್.ಜಿ.ವೆಂಕಟಾಚಲಯ್ಯಗೆ ಪುರಸ್ಕಾರ : ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಜಾಲಪ್ಪ ಶತಮಾನೋತ್ಸವ ಪುರಸ್ಕಾರ ನೀಡಲಾಗುತ್ತಿದೆ. ಜತೆಗೆ 30ಕ್ಕೂ ಹೆಚ್ಚು ಹಿರಿಯ ಗಣ್ಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.