ದೇವದುರ್ಗ: ತಾಲೂಕಿನಿಂದ ಬೇರೆಡೆ ವರ್ಗವಣೆಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಆಗ್ರಹಿಸಿ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎಸ್‌ಎಫ್‌ಐ, ಪ್ರಗತಿಪರ ಸಂಘಟನೆಗಳು ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವಿರಾಪುರ ಮಾತನಾಡಿ, ತಾಲೂಕಿಗೆ 1600 ಶಿಕ್ಷಕ ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ 800 ಶಿಕ್ಷಕರು ಇದುವರೆಗೆ ಕೆಲಸ ನಿರ್ವಹಿಸುತ್ತಿದ್ದರು. ಇದರಲ್ಲಿ 375 ಮಂದಿಯನ್ನು ವರ್ಗಗೊಳಿಸಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸರ್ಕಾರಿ ಶಾಲೆ ಮಕ್ಕಳನ್ನು ಅನಾಥರನ್ನಾಗಿ ಮಾಡಲಾಗುತ್ತಿದೆ.
ತಾಲೂಕಿನಲ್ಲಿ 48125 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ.ದೇವದುರ್ಗ ತಾಲೂಕು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆಗೆ ಮುಕ್ತ ಅವಕಾಶ ನೀಡಿರುವುದು ಕನ್ನಡ ಶಾಲೆಗಳನ್ನು ಮುಚ್ಚುವತ್ತ ಮುನ್ನುಡಿ ಬರೆದಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಶೇ.90 ಶಿಕ್ಷಕರ ಹುದ್ದೆಗಳು ಕಾಲಿ ಉಳಿಯಲಿದ್ದು ಮಕ್ಕಳ ಭವಿಷ್ಯದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವರ್ಗಾವಣೆ ಆದೇಶ ತಡೆಹಿಡಿಯಬೇಕು. ಹೊಸ ಶಿಕ್ಷಕರು ನೇಮಕವಾವವರೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಯಾವ ಹುದ್ದೆ ಖಾಲಿ ಉಳಿಯದಂತೆ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಭೀಮನಗೌಡ, ಮುಖಂಡರಾದ ಮೇಲಪ್ಪ ಬಾವಿಮನಿ, ಶಿವಪ್ಪ ಪಲಕನಮರಡಿ, ನರಸಣ್ಣ ನಾಯಕ, ಮಹಾಲಿಂಗ ದೊಡ್ಡಮನಿ, ಶಿವರಾಜ ನಾಯಕ ಕೊತ್ತದೊಡ್ಡಿ, ಬಸವರಾಜ ಗೋಪಾಳಪುರ, ನಂದಪ್ಪ, ಬಸವರಾಜ ಲಿಂಗದಳ್ಳಿ, ಶಬ್ಬೀರ್, ಮಕ್ತಮ್ ಪಾಷಾ ಇತರರಿದ್ದರು.
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸ್ಥಳಕ್ಕೆ ಡಿಡಿಪಿಐ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಕನನ್ ಪ್ರಭು ಮತ್ತು ಬಿಇಒ ಸುಖುದೇವ್ ಆಗಮಿಸಿ ಮನವಿ ಸ್ವೀಕರಿಸಿದರು. ವರ್ಗಾವಣೆಗೊಂಡ ಶಿಕ್ಷಕರನ್ನು ಜಿಲ್ಲಾಧಿಕಾರಿ ಆದೇಶದಂತೆ ಬಿಡುಗಡೆ ಮಾಡುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದರಿಂದ ಹೋರಾಟ ಹಿಂಪಡೆಯಲಾಯಿತು.