ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಪ್ಯಾಟೆ ಬಸವಣ್ಣ ದೇವಸ್ಥಾನದಲ್ಲಿ ಪರಿಸರ ಸ್ನೇಹಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಸಾಂಪ್ರದಾಯಕವಾಗಿ ವಿಸರ್ಜನೆ ಮಾಡಲಾಯಿತು.
ಎತ್ತಿನಬಂಡಿಯಲ್ಲಿ ತಳಿರು ತೋರಣಗಳಿಂದ ಮಂಟಪ ಮಾಡಿ ಬಂಡಿಯಲ್ಲಿ ಗಣಪನನ್ನು ಮೆರವಣಿಗೆ ಮಾಡಲಾಯಿತು. ಮಹಿಳೆಯರ ಕುಂಬ-ಕಳಸ, ಜಾನಪದ ಕಲಾವಿದರಿಂದ ಹಲಗೆ ಕುಣಿತ, ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಕಣ್ಮನ ಸೆಳೆಯಿತು.
ಗಣೇಶ ಚತುರ್ಥಿ ಅಂಗವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದ ಕಲೆ ಬೆಳೆಸಲು ಜಾನಪದ ಕಲಾವಿದ ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂಥ ರೈತರು, ಶಿಕ್ಷಕರು, ಕಲಾವಿದರು, ಸ್ವಾವಲಂಬಿ ಮಹಿಳೆಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ನೀಡಲಾಯಿತು.
ಗೆಳೆಯರ ಬಳಗದ ಅಧ್ಯಕ್ಷ ರಾಮನಗೌಡ ಮಾಪಾ, ಗ್ರಾಪಂ ಅದ್ಯಕ್ಷೆ ರೇವತಿ ಶಂಕರಗೌಡ ಪಾಟೀಲ್, ಕೆರಿಲಿಂಗಪ್ಪ ನಾಡಗೌಡ, ಸಿದ್ದಯ್ಯ ಸ್ವಾಮಿ, ಬಸವರಾಜ ಸಿದ್ನಕಲ್, ಶರಣು ಇತರರಿದ್ದರು.