ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡದಲ್ಲಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಆದರೆ ನೀರಿನ ಕೊರತೆಯ ಕೂಗು ವರ್ಷಂಪ್ರತಿ ಕೇಳಿಬರುತ್ತಿದೆ. ವಾರ್ಷಿಕ ಸುರಿಯುವ ಸರಾಸರಿ 3500 ಮಿ.ಮೀ ಮಳೆಯನ್ನು ಸಮರ್ಪಕವಾಗಿ ಉಪಯೋಗಿಸಿದರೆ ನೀರಿನ ಕ್ಷಾಮದ ಪ್ರಮೇಯವೇ ಎದುರಾಗದು ಎಂದು ಜಲತಜ್ಞ ಶ್ರೀ ಪಡ್ರೆ ಹೇಳಿದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಮತ್ತು ಪರಿಸರ ಆಯೋಗ ಮಂಗಳೂರು ಧರ್ಮಪ್ರಾಂತ್ಯ ಜಂಟಿ ಆಶ್ರಯದಲ್ಲಿ ನಗರದ ಬಜ್ಜೋಡಿ ಶಾಂತಿ ಕಿರಣ್ ಜ್ಯೋತಿ ನಿವಾಸದಲ್ಲಿ ಭಾನುವಾರ ಜರುಗಿದ ‘ಜಲಬಂಧನ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಒಂದು ಚದರ ಮೀಟರ್ ಜಾಗದಲ್ಲಿ 1 ಮಿಮೀ ಮಳೆ ಬಿದ್ದರೆ ಒಂದು ಲೀಟರ್ ಆಗುತ್ತದೆ. ಒಂದು ಕುಟುಂಬದ ವಾರ್ಷಿಕ ಬಳಕೆಗೆ ಸುಮಾರು 3 ಲಕ್ಷ ಲೀಟರ್ ಧಾರಾಳ ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಅಗತ್ಯ ನೀರು ಅವರ ಮನೆ ಛಾವಣಿ ಮೇಲೆಯೇ ಬೀಳುತ್ತದೆ ಎಂದರು.
ತೆರೆದ ಬಾವಿಗಳನ್ನು ಉಳಿಸಿಕೊಳ್ಳದಿರುವುದು ಮಂಗಳೂರು ಜನರಿಗೆ ದೊಡ್ಡ ಶಾಪ. ಇಲ್ಲಿ ತೆರೆದ ಬಾವಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಮುಚ್ಚಲಾಗಿದ್ದು, ಅವುಗಳಿಗೆ ಬದಲಾಗಿ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಬೋರ್‌ವೆಲ್‌ಗಳನ್ನು ಕೊರೆಯಬಾರದು ಎನ್ನುವ ಅಭಿಪ್ರಾಯ ನನಗೆ ಇಲ್ಲ. ತಮಿಳುನಾಡಿನಲ್ಲಿ ಬೋರ್‌ವೆಲ್‌ಗಳನ್ನು ತೆಗೆಯುವಾಗಲೇ ಅವುಗಳನ್ನು ರೀಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವ ಕಾನೂನು ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ 21 ಆಯೋಗಗಳ ಸಂಯೋಜಕ ಫಾ.ಫೌಸ್ಟಿನ್ ಲೋಬೊ ಅವರು, ಓಡುವ ನೀರನ್ನು ನಡೆಯುವ ಹಾಗೆ ಮಾಡಿ. ನಮ್ಮ ಜಮೀನುಗಳಲ್ಲಿ ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ. ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗುವಂತೆ ಮಾಡುವುದು ನೀರಿನ ಸಮಸ್ಯೆಗೆ ಒಂದು ಉತ್ತಮ ಪರಿಹಾರವಾಗಬಲ್ಲುದು ಎಂದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಸ್ವಾಗತಿಸಿದರು. ಪರಿಸರ ಆಯೋಗ ಮಂಗಳೂರು ಧರ್ಮಪ್ರಾಂತ್ಯ ಕಾರ್ಯದರ್ಶಿ ಲುವಿ ಜೆ.ಪಿಂಟೋ ವಂದಿಸಿದರು. ಚಾರ್ಲ್ಸ್ ಕಾರ್ಯಕ್ರಮ ನಿರೂಪಿಸಿದರು.
ವಿಡಿಯೋ ಅನಾವರಣ: ಜಲಸಾಕ್ಷರತೆಯ ಜಾಗೃತಿ ಮೂಡಿಸುವ ಕೊಂಕಣಿ ಗೀತೆಯ ವಿಡಿಯೋವನ್ನು ಅನಾವರಣಗೊಳಿಸಿದ ಶ್ರೀಪಡ್ರೆ ಅವರು, ಹಾಡು ಸೊಗಸಾಗಿ ಮೂಡಿಬಂದಿದೆ. ಇದು ಕನ್ನಡ, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಉತ್ತಮ ಎಂದು ಅಭಿಪ್ರಾಯಪಟ್ಟರು.
ಕೈತೊಳೆಯಲು ಬಳಸುವಷ್ಟು ನೀರಲ್ಲಿ ಸ್ನಾನ !
ನೀರಿಗೆ ಪರ್ಯಾಯ ಎನ್ನುವುದು ಇಲ್ಲ. ಆದ್ದರಿಂದಲೇ 150 ಮಿ.ಮೀ ಮಳೆಯಾಗುವ ರಾಜಸ್ತಾನದಲ್ಲಿ ನಮ್ಮಲ್ಲಿ ಇರುವಷ್ಟು ನೀರಿನ ಸಮಸ್ಯೆ ಇಲ್ಲ. ನಾವು ಮಸಾಲೆ ದೋಸೆ ತಿಂದು ಕೈತೊಳೆಯಲು ಬಳಸುವಷ್ಟು ನೀರಿನಲ್ಲಿ ರಾಜಸ್ತಾನದ ಜನರು ಸ್ನಾನ ಮುಗಿಸಿ ಬರುತ್ತಾರೆ ಎಂದು ಪಡ್ರೆ ವಿವರಿಸಿದರು.