ಭರತ್ ಶೆಟ್ಟಿಗಾರ್ ಮಂಗಳೂರು
ನಗರದಲ್ಲಿ ಏರುತ್ತಿರುವ ಜನಸಂಖ್ಯೆಯಿಂದ ನೀರಿನ ಬೇಡಿಕೆ ಹೆಚ್ಚುತ್ತಿದೆ. ಸಮೀಕ್ಷೆ ಪ್ರಕಾರ 2046ರ ವೇಳೆಗೆ ನಗರದ ಜನಸಂಖ್ಯೆ ಅಂದಾಜು 10.33 ಲಕ್ಷ ತಲುಪಲಿದ್ದು, ಪ್ರತಿದಿನ ಅಂದಾಜು 236.60 ದಶಲಕ್ಷ ಲೀಟರ್ ನೀರಿನ ಅಗತ್ಯ ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಡಿಬಿ ನೆರವಿನಿಂದ ಜಲಸಿರಿ ಯೋಜನೆಯಡಿ ನಿರಂತರ ನೀರು ಸರಬರಾಜು(24/7) ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯಡಿ 1,15,036 ನಳ್ಳಿ ಸಂಪರ್ಕ ಕಲ್ಪಿಸುವ ಮೂಲಕ 10,33,778 ಮಂದಿ ನಿರಂತರ ನೀರು ಪಡೆಯಲಿದ್ದಾರೆ.
ಕೆಯುಐಡಿಎಫ್‌ಸಿ ಈ ಯೋಜನೆಯ ನೋಡಲ್ ಏಜೆನ್ಸಿ, ಕೇಂದ್ರ ಸರ್ಕಾರದ ಅಮೃತ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಿಂದ ಕಾಮಗಾರಿ ಅನುಷ್ಠಾನಗೊಳ್ಳಲಿವೆ. ಸುಯೆಜ್ ಇಂಡಿಯಾ ಹಾಗೂ ಡಿಆರ್‌ಎಸ್ ಇನ್ಫ್ರಾಟೆಕ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿವೆ.
792.42 ಕೋಟಿ ರೂ. ವೆಚ್ಚ
ಕಾರ್ಯಾಚರಣೆ ಮತ್ತು ನಿರ್ವಹಣೆಗೆ 204.75 ಕೋಟಿ ರೂ. ಮತ್ತು ಕಾಮಗಾರಿಗೆ 587.67 ಕೋಟಿ ರೂ. ಸೇರಿ ಒಟ್ಟು 792.42 ಕೋಟಿ ರೂ. ವೆಚ್ಚದಲ್ಲಿ ಜಲಸಿರಿ ಯೋಜನೆ ಅನುಷ್ಠಾನಗೊಳ್ಳಲಿದೆ. ನಗರದಲ್ಲಿ ಈಗಿರುವ 21 ಮೇಲ್ಮಟ್ಟದ ಜಲ ಸಂಗ್ರಹಾಗಾರದ ಜತೆ 20 ಹೆಚ್ಚುವರಿ ವಿವಿಧ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ. ನಗರದ ವಿವಿಧೆಡೆ ಹಾಲಿ ಇರುವ 8 ನೆಲಮಟ್ಟದ ಜಲ ಸಂಗ್ರಹಗಾರಗಳ ಜತೆಗೆ ಬಾಳ, ಆಫೀಸರ್ಸ್ ಕ್ಲಬ್ ಬಳಿ ಇನ್ನೆರಡು ಟ್ಯಾಂಕ್ ನಿರ್ಮಾಣ. 8 ಹೆಚ್ಚುವರಿ ಬೂಸ್ಟಿಂಗ್ ಪಂಪ್‌ಹೌಸ್(ರೇಚಕ ಸ್ಥಾವರ) ನಿರ್ಮಾಣವಾಗಲಿದೆ. ಕಾಮಗಾರಿ ಆರಂಭವಾಗಿದೆ, 2023ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದ್ದು, ಗುತ್ತಿಗೆ ಸಂಸ್ಥೆಯೇ 8 ವರ್ಷ ನಿರ್ವಹಣೆ ಮಾಡಲಿದೆ.
ನೀರಿನ ಮೂಲದ್ದೇ ಚರ್ಚೆ
ತುಂಬೆಯಿಂದ ಪ್ರಸ್ತುತ 161 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದ್ದರೂ, ನಗರಕ್ಕೆ ಕೇವಲ 140 ಎಂಎಲ್‌ಡಿ ಮಾತ್ರ ತಲುಪುತ್ತಿದೆ. ಹೀಗಾದರೆ ಮುಂದಿನ 10 ವರ್ಷದಲ್ಲಿ ನೀರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಇರುವ ನೀರಿನ ಮೂಲ ಬಳಸಿಕೊಂಡು 2046ರವರೆಗೆ 24/7 ನೀರು ಸರಬರಾಜು ಸಾಧ್ಯವೇ? ದೊಡ್ಡ ಮೊತ್ತ ವಿನಿಯೋಗಿಸಿ ಯೋಜನೆ ವಿಫಲವಾದರೆ ಯಾರು ಹೊಣೆ ಎನ್ನುವುದು ಪಾಲಿಕೆ ಸದಸ್ಯರ ಪ್ರಶ್ನೆ. ತುಂಬೆಯಲ್ಲಿ ಪ್ರಸ್ತುತ 6 ಮೀಟರ್ ನೀರು ಸಂಗ್ರಹ ಮಾಡಲಾಗುತ್ತಿದೆ. 7 ಮೀಟರ್‌ಗೆ ಏರಿಸಿದರೆ ಹೆಚ್ಚುವರಿ 374 ಎಕರೆ ಪ್ರದೇಶ ಮುಳುಗಡೆಯಾಗಲಿದೆ. ಆದ್ದರಿಂದ ಅಷ್ಟು ಜಮೀನಿಗೆ ನೆಲಬಾಡಿಗೆ ನೀಡಿ ನೀರು ನಿಲ್ಲಿಸುವುದರ ಬದಲು ಅಡ್ಯಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ/ಕಿಂಡಿ ಅಣೆಕಟ್ಟಿನ ನೀರನ್ನು ಮುಂದಿನ ದಿನದಲ್ಲಿ ನಗರಕ್ಕೆ ಸರಬರಾಜು ಮಾಡಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಮುಖ ಕಾಮಗಾರಿ
ಪಣಂಬೂರು ಮತ್ತು ಬೆಂದೂರಿನಲ್ಲಿರುವ ನೀರು ಶುದ್ಧೀಕರಣ ಘಟಕಗಳ ಬದಲು ತುಂಬೆ ರಾಮಲ್‌ಕಟ್ಟೆಯಲ್ಲಿ 81.7 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ, ತುಂಬೆಯಲ್ಲಿ 60 ಎಂಎಲ್‌ಡಿ ಸಾಮರ್ಥ್ಯದ ಕೆಸರು ನೀರು ನಿರ್ವಹಣಾ ಘಟಕ ನಿರ್ಮಾಣ. ನಗರದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ 20 ಜಲಸಂಗ್ರಹಾಗಾರಕ್ಕೆ 200 ಮಿ.ಮೀ.ನಿಂದ 450 ಮಿ.ಮೀ. ವ್ಯಾಸದ 39.96 ಕಿ.ಮೀ. ಉದ್ದದ ಹೊಸ ಕೊಳವೆ ಅಳವಡಿಕೆ. ಹಾಲಿ ಇರುವ ಶುದ್ಧ ನೀರು ಸರಬರಾಜು ಕೊಳವೆಗಳಲ್ಲಿ ಸಾಮರ್ಥ್ಯ ಕುಂಠಿತಗೊಂಡಿರುವುದರಿಂದ 300 ಮೀ.ನಿಂದ 914 ಮೀ. ವ್ಯಾಸದ 25.12 ಕಿ.ಮೀ. ಕೊಳವೆ ಮಾರ್ಗ ಬದಲಾಯಿಸುವುದು. ಕುಡ್ಸೆಂಪ್ ಯೋಜನೆಯಡಿ ಅಳವಡಿಸಿರುವ ವಿತರಣಾ ಜಾಲದ ಜತಗೆ ಹೆಚ್ಚುವರಿಯಾಗಿ 1388 ಕಿ.ಮೀ. ಉದ್ದರ 63 ಮಿ.ಮೀ.ನಿಂದ 250 ವ್ಯಾಸದ ಎಚ್‌ಡಿಪಿಇ ಪೈಪ್ ಅಳವಡಿಕೆ. ಪ್ರತಿ ಮನೆಗೆ ಕ್ಲಾಸ್ ಬಿ.ಮಲ್ಟಿ ಜೆಟ್ ವಾಟರ್ ಮೀಟರ್ ಸಂಪರ್ಕ ನೀಡಲಾಗುತ್ತದೆ.
ಮಂಗಳೂರು ನಗರಕ್ಕೆ 24 ಗಂಟೆ ನಿರಂತರ ನೀರು ಪೂರೈಕೆ ಯೋಜನೆಯಲ್ಲಿ ಜಲ ಮೂಲ ಪ್ರಮುಖ ವಿಚಾರವಾಗಿದೆ. ಪ್ರಸ್ತುತ ಅಡ್ಯಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ಯೋಜನೆಗೆ ಪ್ಲಸ್ ಪಾಯಿಂಟ್ ಆಗಿದ್ದು, ಯಾವುದೇ ಅಡ್ಡಿ ಇಲ್ಲದೆ ನಿರಂತ ನೀರು ಪೂರೈಕೆ ಸಾಧ್ಯವಾಗಲಿದೆ.
ಅಕ್ಷಯ್ ಶ್ರೀಧರ್, ಮಹಾನಗರ ಪಾಲಿಕೆ ಆಯುಕ್ತ