ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ವೈಫಲ್ಯ ಕಾಣದಿರಲು, ಹಾಗೆಯೇ ಬಿಡುಗಡೆಯ ಅನುದಾನವು ಹಾಗೆಯೇ ವಾಪಸ್ ಹೋಗದಿರುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿನ ತೊಡಕುಗಳನ್ನು ನಿವಾರಿಸುವ ಸಲುವಾಗಿ ಕೈಗೊಂಡಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಜಲಜೀವನ್ ಯೋಜನೆಯ ಅನುಷ್ಠಾನಕ್ಕೆ ಸ್ಥಳೀಯವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಚರ್ಚೆಯ ಅಗತ್ಯವಿದ್ದಲ್ಲಿ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದರು.
ಯೋಜನೆಯ ಅನುಷ್ಠಾನಕ್ಕೆ ನಿರ್ದಿಷ್ಟ ಕಾಲ ಮಿತಿ ನಿಗದಿಪಡಿಸಬೇಕು. ಹಾಗೆಯೇ ಪರಿಣಾಮಕಾರಿಯಾಗಿ ಕೆಲಸವನ್ನು ಮುಗಿಸಿ, ಜನರಿಗೆ ಗುಣಮಟ್ಟದ ಸೇವೆ ಸಿಗುವಂತಾಗಬೇಕು ಎಂದರು.
ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ತಲಾ ಶೇ.45 ರಷ್ಟು ಅನುದಾನವನ್ನು ನೀಡುತ್ತಿದೆ. ಉಳಿದಂತೆ ಶೇ.10 ರಷ್ಟು ವಂತಿಗೆಯನ್ನು ಫಲಾನುಭವಿಯಿಂದ ಸಂಗ್ರಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯ ಪಿಡಿಒಗಳು ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದರು.
* ಗ್ರಾಮವಾರು ಪ್ರಗತಿಯ ಗುರಿ
ಜಿಲ್ಲೆಯಲ್ಲಿನ 1,645 ಗ್ರಾಮಗಳಲ್ಲಿ ಜಲ್ ಜೀವನ ಯೋಜನೆ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಈ ಪೈಕಿ 1419 ಗ್ರಾಮಗಳಲ್ಲಿ 1 ಕೋಟಿ ರೂ ಒಳಗೆ ಮತ್ತು 146 ಗ್ರಾಮಗಳಲ್ಲಿ 1 ಕೋಟಿ ರೂಗಳಿಗೂ ಹೆಚ್ಚಿನ ಕ್ರಿಯಾ ಯೋಜನೆ ವೆಚ್ಚವನ್ನು ರೂಪಿಸಲಾಗಿದೆ. 642 ಗ್ರಾಮಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು 535 ಗ್ರಾಮಗಳಿಗೆ ಕಾರ್ಯಾದೇಶ ನೀಡಲಾಗಿದೆ. ಉಳಿದಂತೆ ಎರಡನೇ ಹಂತದಲ್ಲಿ 1002 ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದ್ದು 670 ಗ್ರಾಮಗಳಲ್ಲಿ ಟೆಂಡರ್ ಕರೆಯಲಾಗಿದೆ. 2024 ರೊಳಗೆ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು.
* ಗುತ್ತಿಗೆದಾರರ ಅಳಲು
ಜಲ ಜೀವನ್ ಜೀವನ ಯೋಜನೆಯ ಕಾಮಗಾರಿಗಳಲ್ಲಿ ಟೆಂಡರ್‌ನಲ್ಲಿ ಭಾಗವಹಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.
ಕ್ರಿಯಾಯೋಜನೆಯಲ್ಲಿನ ವ್ಯತ್ಯಾಸ, ಕಾರ್ಯಾದೇಶ ವಿಳಂಬ, ಬಿಲ್ ಬಾಕಿ ಉಳಿಸಿಕೊಳ್ಳುವಿಕೆ, ಸರ್ವೇಯಲ್ಲಿನ ಲೋಪದೋಷಗಳು, ಗುಣಮಟ್ಟ ತಪಾಸಣೆಯ ಹೆಸರಿನಲ್ಲಿ ಸತಾಯಿಸುವಿಕೆಯ ಬಗ್ಗೆ ಗಮನ ಸೆಳೆಯಲಾಯಿತು. ಜಿಲ್ಲೆಯ 1,100 ಗ್ರಾಮಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದರು. ಇದನ್ನು ಆಲಿಸಿದ ಸಚಿವರು, ಗುಣಮಟ್ಟದಲ್ಲಿ ಕೆಲಸ ಮುಗಿಸಿದ ಗುತ್ತಿಗೆದಾರರು, ಬಿಲ್ ಮಂಜೂರಾತಿಗೆ ಯಾವುದೇ ಸಂಶಯಪಡುವ ಅಗತ್ಯ ಇಲ್ಲ. ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಅಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.