ಆಲೂರು: ಜನರ ಆರೋಗ್ಯದ ಹಿತದೃಷ್ಟಿ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಸಾಮಾಜಿಕ ಕಾರ್ಯವನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕಲಗೂಡು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 7.60 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಯೋಜನೆಯಡಿ ಮನೆ ಮನೆಗೂ ಕುಡಿಯುವ ನೀರು ನೀಡುವ ಉದ್ದೇಶ ಹೊಂದಲಾಗಿದೆ. ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7.60 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಸುಮಾರು 1218 ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ 5 ಗ್ಯಾರಂಟಿಗಳ ಭರವಸೆ ನೀಡಿತ್ತು. ಗೆದ್ದ ನಂತರ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಒದ್ದಾಡುತ್ತಿದೆ. ಯಾವುದೇ ಕ್ಷೇತ್ರಗಳಿಗೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಅವರ ಪಕ್ಷದ ಶಾಸಕರೇ ಬಂಡಾಯ ಹೇಳುವ ದಿನಗಳು ದೂರವಿಲ್ಲ ಎಂದರು.
ತಾಪಂ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳಿಗೂ ಕುಡಿಯುವ ನೀರು ಒದಗಿಸಲು ತಾಲೂಕಿನಾದ್ಯಂತ ನೂರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಾಸಕರು ಕಾರ್ಯಕ್ರಮದ ಯಶಸ್ವಿಗೆ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಒಳ್ಳೆಯ ಕೆಲಸಗಳಿಗೆ ಪಕ್ಷಾತೀತವಾಗಿ ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಹುಲ್ಲಳ್ಳಿ ನಾಗರಾಜ್, ಕಣತೂರು ಗ್ರಾಪಂ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷೆ ರಾಧಾ, ಪಿಡಿಒ ಪುರುಷೋತ್ತಮ, ಸದಸ್ಯರಾದ ಪೃಥ್ವಿ ಜಯರಾಮ್, ಪದ್ಮಾ, ಬಿಜೆಪಿ ಮುಖಂಡರಾದ ಲೋಕೇಶ್, ಅಜಿತ್ ಚಿಕ್ಕಣಗಾಲ್, ಹನುಮಂತೇಗೌಡ, ಗ್ರಾಮದ ಹಿರಿಯ ಮುಖಂಡ ಡಿ.ರಾಮು, ಜಗದೀಶ್, ಕುಮಾರ್ ಇತರರು ಇದ್ದರು.