ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಯ್ಕೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಗ್ರಾಪಂ ಅಧ್ಯಕ್ಷೆ ಗಂಗವ್ವ ದ್ಯಾಮಣ್ಣ ಜಂಗಣ್ಣವರ ವಿರುದ್ಧ ಕೆಲ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರಿಂದ ಅಧ್ಯಕ್ಷರ ಆಯ್ಕೆಗೆ ಬುಧವಾರ ಮಧ್ಯಾಹ್ನ 12ಕ್ಕೆ ಸಭೆ ನಿಗದಿಯಾಗಿತ್ತು.
ಆಯ್ಕೆ ಸಭೆಗೆ ತಡೆಯಾಜ್ಞೆ ನೀಡಿರುವುದರಿಂದ ಸಭೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಗದಗ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯನ್ನು ರದ್ದುಪಡಿಸಲಾಯಿತು.
ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಅವರ ಅಧಿಕಾರದ ಅವಧಿ ಕೇವಲ ಆರು ತಿಂಗಳು. ಏಕೆಂದರೆ ಅಲ್ಲಿ ಯಾವುದಾದರೊಂದು ನೆಪದಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗುತ್ತದೆ. ಈಗಾಗಲೆ ಹೀಗೆ ಐದಾರು ಬಾರಿಯಾಗಿದ್ದು, ಇದು ಗ್ರಾಮದ ಅಭಿವೃದ್ಧಿಗೆ ಹೊಡೆತ ನೀಡುತ್ತಿದೆ ಎಂಬುದು ಜಕ್ಕಲಿಯ ಸಾರ್ವಜನಿಕರ ಅಳಲು.
ಸಂಭ್ರಮಾಚರಣೆ
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಸಭೆ ರದ್ದಾಗಿ ಪ್ರಸ್ತುತ ಅಧ್ಯಕ್ಷರೆ ಮುಂದಿನ ಆದೇಶದವರೆಗೂ ಮುಂದುವರಿಯುತ್ತಾರೆ ಎಂದು ತಿಳಿಯುತ್ತಿದ್ದಂತೆ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.