ಜಿಲ್ಲೆ

ವಿಶ್ವಕ್ಕೆ ಮಾದರಿಯಾದ ಜಕಣಾಚಾರಿ

ಪ್ರಸಿನ್ ಕೆ.ಆರ್

ಬೇಲೂರು: ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಸಾವಿರ ವರ್ಷಗಳ ಇತಿಹಾಸಕ್ಕೆ ಕಾರಣರಾಗುವ ಮೂಲಕ ಅಮರ ಶಿಲ್ಪಿ ಜಕಣಾಚಾರಿಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಸಿ ಮಾತನಾಡಿದ ಅವರು, ಶಿಲ್ಪ ಶಾಸ್ತ್ರದ ಅಧಿಪತಿ ಜಕಣಾಚಾರಿಯವರು ಜಗತ್ತಿಗೆ 0ಕೆತ್ತನೆಯ ಮೂಲಕವೇ ಭಕ್ತಿಯ ಬೀಜವನ್ನು ಬಿತ್ತಿದವರು. ಜ್ಞಾನ, ಭಾವನೆ, ಧರ್ಮ, ಸಂಸ್ಕೃತಿಯ ಶಿಲ್ಪಕಲೆಗಳನ್ನು ಕೊಡುಗೆಯಾಗಿ ನೀಡಿ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿ ವಿಶ್ವಕ್ಕೆ ಮಾದರಿಯಾಗಿರುವುದಲ್ಲದೆ, ವಿಶ್ವಕರ್ಮ ಸಮಾಜವನ್ನು ಗುರುತಿಸುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕರ್ಮ ಯೋಜನೆಯ ಹೆಸರಿನಲ್ಲಿ ಎಲ್ಲ ವಿಧದ ಕುಶಲ ಕರ್ಮಿಗಳಿಗೂ ಆರ್ಥಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸೌಲಭ್ಯಗಳನ್ನು ಕೊಡುತ್ತಿದ್ದಾರೆ. ಇದನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ವಿಶ್ವ ಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮಚಾರ್ಯ ಮಾತನಾಡಿ, ಜಕಣಾಚಾರಿಯವರು ಶಿಲ್ಪಕಲೆಗಳ ಮೂಲಕವೇ ಜಗದ್ವಿಖ್ಯಾತರಾದವರು. ಅವರು ಕೆತ್ತಿದ ಶಿಲ್ಪಗಳು ಇಂದಿಗೂ ಜೀವಂತವಾಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೇಲೂರು ತಾಲೂಕಿನ ಹಗರೆ ಸಮೀಪದ ದೊಡ್ಡಗದ್ದವಳ್ಳಿಗೆ ಆಗಮಿಸಿ ಲಕ್ಷ್ಮೀ ಮೂರ್ತಿಯೊಂದಿಗೆ ದೇಗುಲ ನಿರ್ಮಿಸುತ್ತಾರೆ. ನಂತರ ಹೊಯ್ಸಳರ ದೊರೆ ಬಿಟ್ಟಿದೇವ(ವಿಷ್ಣುವರ್ಧನ)ಆಳುತಿದ್ದ ವೇಲಾಪುರಿ-ಬೇಲೂರಿಗೆ ಆಗಮಿಸಿ ಶ್ರೀಚನ್ನಕೇಶವಸ್ವಾಮಿ ದೇವರ ಮೂರ್ತಿ ಮತ್ತು ಸುಂದರ ಶಿಲ್ಪಕಲೆಗಳನ್ನು ಹೊಂದಿರುವ ದೇಗುಲ ನಿರ್ಮಿಸುತ್ತಾರೆ. ಇಂದಿಗೂ ಬೇಲೂರಿನ ದೇಗುಲ ಶಿಲ್ಪಕಲೆಗೆ ಮೂಲ ಸ್ಥಾನವಾಗಿದೆ. ಕಳೆದ 45 ವರ್ಷಗಳಿಂದ ವಿಶ್ವ ಕರ್ಮ ಸಮಾಜದ ಸಂಘವನ್ನು ಸ್ಥಾಪಿಸಿ ಜಕಣಾಚಾರಿಯವರ ಕಾರ್ಯಕ್ರಮಗಳನ್ನು ಮಾಡುತಿದ್ದೇವೆ ಎಂದರು.

ತಹಸೀಲ್ದಾರ್ ಎಂ.ಮಮತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಬಿಆರ್‌ಸಿ ಶಿವಮರಿಯಪ್ಪ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪುರುಷೊತ್ತಮಚಾರ್, ಜಕಣಾಚಾರ್ಯ ವೇದಿಕೆ ಅಧ್ಯಕ್ಷ ಅರುಣಾಚಲಂ, ಸಂಚಾಲಕ ವಿಶ್ವನಾಥಾಚಾರ್, ಉಮೇಶ್, ನಾರಾಯಣಾಚಾರ್, ಪರಮೇಶಾಚಾರ್, ಬಾಬು, ಕೃಷ್ಣಾಚಾರ್ ಇತರರಿದ್ದರು.