ಮಡಿಕೇರಿ:
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಗೋಮಾತೆಯ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಒತ್ತಾಯಿಸಿದ್ದಾರೆ. ಹಿಂದುಗಳು ಗೋ ಮಾತೆ ಎಂದು ಪೂಜಿಸುವ ಗೋವಿನ ಕೆಚ್ಚಲು ಕತ್ತರಿಸಿ ಆ ಗೋವಿಗೆ ನರಕ ಯಾತನೆ ನೀಡಿದ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಬೇಕು. ಆ ವ್ಯಕ್ತಿ ಹಿಂದಿರುವ ಶಕ್ತಿಯನ್ನು ಬಯಲಿಗೆ ತರುವುದರ ಮೂಲಕ ಆ ಮೂಕ ಪ್ರಾಣಿಗೆ ಶಿಕ್ಷೆ ನೀಡಿದ ಆರೋಪಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದ್ದು ಗೋ ಕಳ್ಳತನ ಸೇರಿದಂತೆ ಅಕ್ರಮ ಚಟುವಟಿಕೆ ಗಳಿಗೆ ಸರ್ಕಾರ ಪರವಾನಿಗೆ ನೀಡಿದೆ ಎಂಬ ಸಂಶಯ ಜನತೆಯಲ್ಲಿ ಮೂಡಿದೆ. ಬೀದಿ ನಾಯಿಗಳ ಬಗ್ಗೆ ಅಪಾರ ಕನಿಕರ ಹೊಂದಿರುವ ಪ್ರಾಣಿ ದಯಾ ಸಂಘಗಳು ಹಸುವಿನ ಮೇಲೆ ನಡೆದ ಈ ಅಮಾನವಿಯ ಕೃತ್ಯದ ಬಗ್ಗೆ ಬಾಯಿ ಮುಚ್ಚಿ ಕುಳಿತಿರುವುದು ಕೂಡ ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದೆ. ಸಣ್ಣ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿ ನಡೆದು ಸಾವು ನೋವು ಸಂಭವಿಸುವ ಸಂದರ್ಭ ಬೀದಿ ನಾಯಿಗಳ ನಿಯಂತ್ರಣ ಬಗ್ಗೆ ಸಾರ್ವಜನಿಕರಿಂದ ಸಲಹೆಗಳು ಬಂದಾಗ ಬೀದಿಗೆ ಬರುವ ಪ್ರಾಣಿ ಪ್ರಿಯರು ಹಸುವಿನ ಮೇಲಿನ ದಾಳಿ ಬಗ್ಗೆ ಮೌನ ವಹಿಸಿರುವುದು ಖಂಡನಿಯ.
ಹಸುವಿನ ಮೇಲಿನ ಈ ದಾಳಿ ಪರೋಕ್ಷವಾಗಿ ನಾಡಿನ ರೈತರು ಮತ್ತು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕೆಣಕಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನವಾಗಿದ್ದು, ಸರ್ಕಾರ ಇಂಥ ವ್ಯಕ್ತಿಗಳನ್ನು ಕಠಿಣ ಕಾನೂನುಗಳ ಮೂಲಕ ಶಿಕ್ಷೆಗೆ ಗುರಿಪಡಿಸಬೇಕು. ಸಚಿವ ಜಮೀರ್ ಅಹಮದ್ ಹಸು ವಿನ ಮಾಲೀಕನಿಗೆ ಬದಲಿ ಹಸು ಕೊಡುವ ಹೇಳಿಕೆ ಕೃತ್ಯಕ್ಕೆ ಒಳಗಾದ ಗೋವಿಗೆ ಕೊಡುವ ನ್ಯಾಯವಲ್ಲ. ಇಂಥ ಕೃತ್ಯಕ್ಕೆ ಕಡಿವಾಣ ಹಾಕಲು ಗಲ್ಲು ಶಿಕ್ಷೆಯೇ ಸರಿಯಾದ ಕ್ರಮ ಎಂದಿದ್ದಾರೆ.