ಭದ್ರಾವತಿ: ಬೆಳಗಾವಿಯಲ್ಲಿ ಜೈನ ಮುನಿ ಹತ್ಯೆ ಖಂಡಿಸಿ ಸೋಮವಾರ ಜೈನ ಸಮಾಜದ ಪದಾಧಿಕಾರಿಗಳು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆದಿ ಸಾಧು ಸಂತರಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು.
ಭದ್ರಾವತಿ ತಾಲೂಕು ಜೈನ ಸಮಾಜದ ಪದಾಧಿಕಾರಿಗಳು ವಿವಿಧ ಸಮಾಜ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಸೀಲ್ದಾರ್ ರಂಗಮ್ಮ ಅವರಿಗೆ ಮನವಿ ಸಲ್ಲಿಸಿದರು.
ಆಧ್ಯಾತ್ಮಿಕ ಪ್ರವರ್ತಕರು, ಶಾಂತಿಪ್ರಿಯರು ಹಾಗೂ ಅಹಿಂಸೆ ಪ್ರತಿಪಾದಕರೂ ಆಗಿರುವ ಜೈನ ಮುನಿಗಳ ಮೇಲೆ, ಸಾಧುಗಳ ಮೇಲೆ ಇತ್ತೀಚೆಗೆ ಹಲ್ಲೆಗಳು ಹೆಚ್ಚಾಗುತ್ತಿವೆ. ಶ್ರೀಗಳ ಹತ್ಯೆ ನಡೆಯುತ್ತಿವೆ. ಇದು ಜೈನ ಸಮುದಾಯ ಹಾಗೂ ಇಡೀ ಮನುಕುಲಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಡಿಸಿದರು.
ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜ ಅವರನ್ನು ಅಪಹರಿಸಿ ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯ. ಹತ್ಯೆಕೋರರಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಸಾಧು, ಸಂತರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಜೈನ ಸಮಾಜದ ಅಧ್ಯಕ್ಷ ರತನ್‌ಚಂದ್ ಜೈನ್, ಕಾರ್ಯದರ್ಶಿ ದಿಲೀಪ್‌ಕುಮಾರ್ ಮೆಹ್ತಾ, ಸಂಪತ್‌ರಾಜ್ ಬಾಂಟಿಯ, ಹಿತೇಶ್ ಕುಮಾರ್, ಹರೀಶ್ ಶರ್ಮ, ಸುದೇಶ್ ಕುಮಾರ್, ಭರತ್ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಕದಿರೇಶ್, ಬಿ.ಕೆ.ಶ್ರೀನಾಥ್, ನಾರಾಯಣಪ್ಪ, ವಿಎಚ್‌ಪಿ ಪ್ರಮುಖ ಹಾ.ರಾಮಪ್ಪ ಇತರರಿದ್ದರು.